ಹೊಸದಿಗಂತಯ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆಯ ತಾಲೂಕಿನ ಹಂಚಿನಾಳ ಕ್ಯಾಂಪ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಕೇವಲ 10 ರೂಪಾಯಿ ಬಾಕಿ ಹಣದ ವಿಚಾರಕ್ಕಾಗಿ ಆರಂಭವಾದ ಸಣ್ಣ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆ ಬಿಡಿಸಲು ಮಧ್ಯಪ್ರವೇಶಿಸಿದ್ದ ಗಿಲ್ಲೆಸುಗೂರು ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಮೇಘನಾಥ್ (42) ಎಂಬುವವರನ್ನು ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್‌ನ 6 ಜನ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಕ್ ಸಿಬ್ಬಂದಿಯಾದ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್ ಮತ್ತು ಪ್ರವೀಣ್ ಬಂಧಿತ ಆರೋಪಿಗಳಾಗಿದ್ದು, ಇಡೀ ಹೊಡೆದಾಟದ ದೃಶ್ಯಗಳು ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕೊಲೆಗೆ ಕಾರಣವಾದ ಆ 10 ರೂಪಾಯಿ:
ಮಹೇಶ್ ಮತ್ತು ನಾಗರಾಜ್ ಎಂಬುವವರು ಬಾಟಲಿಯಲ್ಲಿ 110 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದ್ದರು. ಆದರೆ ಹಣ ನೀಡುವಾಗ ಬಂಕ್ ಸಿಬ್ಬಂದಿಗೆ ಕೇವಲ 100 ರೂ. ಮಾತ್ರ ಕೊಟ್ಟಿದ್ದರು. ಉಳಿದ 10 ರೂ. ಬಾಕಿ ಹಣವನ್ನು ನೀಡುವಂತೆ ಬಂಕ್ ಸಿಬ್ಬಂದಿ ಒತ್ತಾಯಿಸಿದಾಗ ಇವರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.
ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ನಾಯಕ!
ಬಂಕ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಗಲಾಟೆ ಜೋರಾಗುತ್ತಿದ್ದನ್ನು ಗಮನಿಸಿದ ಮಾಜಿ ಗ್ರಾ.ಪಂ. ಸದಸ್ಯ ಮೇಘನಾಥ್ ಸ್ಥಳಕ್ಕೆ ಬಂದು ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ತೀವ್ರ ಆಕ್ರೋಶಗೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ದೊಣ್ಣೆಗಳನ್ನು ಹಿಡಿದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಂಡ ಮೇಘನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಇಡಪನೂರು ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಕ್ಷಣವೇ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.



