ನಾಗಮಂಗಲದ ಅಧಿದೇವತೆ ಶ್ರೀ ಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ ಸಂಭ್ರಮ

ಹೊಸದಿಗಂತ ವರದಿ, ನಾಗಮಂಗಲ

ಪಟ್ಟಣ ಸೇರಿದಂತೆ ನೆರೆಯ ಹತ್ತು ಗ್ರಾಮಗಳ ಅಧಿದೇವತೆ ಶ್ರೀ ಬಡಗೂಡಮ್ಮದೇವಿ ಕೊಂಡೋತ್ಸವ, ರಥೋತ್ಸವ ಹಾಗೂ ಜಾತ್ರಾಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮೇ.1ರಂದು ಅಮ್ಮನವರಿಗೆ ಹೂವಿನಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ ನಡೆಯಿತು. ಮೇ.2ರ ಗುರುವಾರ ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ಇಡೀರಾತ್ರಿ ರಂಗಕುಣಿತ, ಪೂಜಾ ಕಾರ್ಯಗಳು ನೆರವೇರಿದವು. ಮೇ.3ರ ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ಅಲಂಕಾರಭೂಷಿತಳಾದ ಶ್ರೀ ಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು ಹೋಮ-ಹವನಾದಿ ಕಾರ್ಯಕ್ರಮಗಳೊಂದಿಗೆ ಅಭಿಷೇಕ, ಮಹಾಮಂಗಳಾರತಿ ನಂತರ ಸಂಜೆ ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಷಮಾಡಲಾಯಿತು.

ಶನಿವಾರ ಬೆಳಗಿನಜಾವ 5ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯ ದೇವರಗುಡ್ಡಪ್ಪ ಪೂಜೆಯೊಂದಿಗೆ ಕೊಂಡ ಹಾಯ್ದರು. ಮಧ್ಯಾಹ್ನ ಪಟ್ಟಣದ ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿಯ ನೂರಾರು ವಕ್ಕಲುಗಳು ತಂಬಿಟ್ಟು ಬಾಳೆಹಣ್ಣು ತುಂಬಿದ ಬುಟ್ಟಿ ಸಮೇತ, ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ಟ್ರಾಕ್ಟರ್‌ನಲ್ಲಿರಿಸಿ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಟಿ.ಬಿ. ಬಡಾವಣೆಯ ಮೂಲದೇವಸ್ಥಾನಕ್ಕೆ ಕೊಂಡೊಯ್ದರು.

ಸಂಜೆ 5.30ರಗೋಧೂಳಿ ಲಗ್ನದಲ್ಲಿ ನಡೆದ ಅಮ್ಮನವರ ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಮತ್ತು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು, ರಥದ ಕಳಶಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಭಕ್ತಿಭಾವ ಸಮರ್ಪಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!