ನಾಗಸ್ವಾಮಿ -ಭಾರತದ ಚರಿತ್ರೆ, ಸಂಸ್ಕೃತಿಗಳಿಗೆ ಅನನ್ಯ ಕೊಡುಗೆ ನೀಡಿ ನಿರ್ಗಮಿಸಿದ ಮಹಾನ್ ಜೀವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಪುರಾತತ್ವಶಾಸ್ತ್ರಜ್ಞ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಆರ್. ನಾಗಸ್ವಾಮಿ (91) ಅವರು ಜನವರಿ 23ರಂದು ವಿಧಿವಶರಾಗಿದ್ದಾರೆ.

ತಮಿಳುನಾಡು ಪುರಾತತ್ವ ಇಲಾಖೆಯ ಸ್ಥಾಪಕರಾದ ನಾಗಸ್ವಾಮಿ ಅವರು ದಶಕಗಳ ಕಾಲ ಭಾರತದ ಪುರಾತತ್ವ ಸರ್ವೇಕ್ಷಣೆಯಲ್ಲಿ ಗುರುತಿಸಿಕೊಂಡಿದ್ದರು. ತಮಿಳುನಾಡಿನ ಪುರಾತತ್ವ ಇಲಾಖೆಯಲ್ಲಿ ತಮ್ಮ ನಿವೃತ್ತಿವರೆಗೂ ಅಂದರೆ 22 ವರ್ಷಗಳ ಕಾಲ ಕಾರ್ಯನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

2018 ರಲ್ಲಿ ನಾಗಸ್ವಾಮಿ ಅವರನ್ನು ಪದ್ಮಭೂಷಣ ಪ್ರಶಸ್ತಿ ಅರಸಿ ಬಂತು. ಪುರಾತತ್ವಶಾಸ್ತ್ರಜ್ಞರ ಹಲವು ಪೀಳಿಗೆಗೆ ಇವರು ಗುರುವಾಗಿದ್ದರು. ಸೈದ್ಧಾಂತಿಕವಾಗಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಪುರಾತತ್ವಶಾಸ್ತ್ರಜ್ಞರು ಕೂಡ ಅವರು ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗೌರವಿಸುತ್ತಾರೆ.

ನಾಗಸ್ವಾಮಿ ಅವರು ಸ್ಮಾರಕಗಳಿಗೆ ಜನಪ್ರಿಯ ಮಾರ್ಗದರ್ಶಿಗಳನ್ನು ರಚಿಸಿ ತಮಿಳುನಾಡಿನ ಪುರಾತತ್ವ ಶಾಸ್ತ್ರವನ್ನು ಜನಪ್ರಿಯಗೊಳಿಸಿದ್ದರು. ಹತ್ತಿರದ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳನ್ನು ಸ್ವಚ್ಛಗೊಳಿಸಿ, ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಿದ್ದರು. ಪಾತೂರು ನಟರಾಜ ಪ್ರತಿಮೆಯನ್ನು ಮರಳಿ ತರುವಲ್ಲಿಯೂ ಅವರು ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಪ್ರಸಿದ್ಧ ‘ಚಿದಂಬರ ನಾಟ್ಯಾಂಜಲಿ ಉತ್ಸವ’ವನ್ನು ನಾಗಸ್ವಾಮಿ ಅವರು ಪ್ರಾರಂಭಿಸಿದ್ದರು.

ಉತ್ಸವದಲ್ಲಿ ಭರತ ನಾಟ್ಯ, ಕೂಚುಪುಡಿ, ಮೋಹಿನಿ ಅಟ್ಟಂ, ಕಥಕ್ ಒಡಿಸ್ಸಿ, ಗೌಡಿಯ ನೃತ್ಯ ಮತ್ತು ಚೋಲಂ ಮುಂತಾದ ಎಲ್ಲಾ ಪ್ರಕಾರಗಳನ್ನು ಪ್ರತಿನಿಧಿಸುವ ಪ್ರತಿಭಾನ್ವಿತ ನೃತ್ಯಗಾರರು ಭಾಗವಹಿಸುತ್ತಾರೆ. ತಮಿಳುನಾಡಿನ ಚಿದಂಬರಂನ ಪವಿತ್ರ ದೇವಾಲಯದಲ್ಲಿ ನಟರಾಜನಿಗೆ ತಮ್ಮ ನೃತ್ಯ ಅರ್ಪಿಸುತ್ತಾರೆ. ಈ ಎಲ್ಲ ಕಲಾವಿದರನ್ನು ಪ್ರತಿ ವರ್ಷ ಸೇರಿಸುವ ಜವಾಬ್ದಾರಿಯೂ ನಾಗಸ್ವಾಮಿ ಅವರದ್ದು.

ನಾಗಸ್ವಾಮಿ ಅವರು ‘ಮಾಸ್ಟರ್ ಪೀಸ್ ಆಫ್ ಇಂಡಿಯನ್ ಬ್ರಾನ್ಝ್’, ‘ಶಿವ ಭಕ್ತಿ’, ‘ತಮಿಳುನಾಡಿನಲ್ಲಿ ತಾಂತ್ರಿಕ ಆರಾಧನೆ’, ಡಾ. ಫ್ರಾಂಕೋಯಿಸ್ ಅವರ ಜತೆ ಫ್ರೆಂಚ್‌ನಲ್ಲಿ ‘ಉತ್ತರಮೆರೂರ್ ಹಾಗೂ ದಕ್ಷಿಣ ಭಾರತೀಯ ಕಲೆ ಮತ್ತು ವಾಸ್ತುಶಿಲ್ಪ ಅಂಶಗಳು’ ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ನಾಗಸ್ವಾಮಿ ಅವರ ಲೇಖನಗಳನ್ನು 23 ಭಾಷೆಗಳಿಗೆ ಅನುವಾದಿಸಲಾಗಿದೆ ಹಾಗೂ ಯುನೆಸ್ಕೋದ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!