September 26, 2026
Saturday, September 26, 2026
spot_img

ನಂದಿನಿ ಹಾಲಿನ ದರ ಲೀಟರ್‌ಗೆ 10 ರೂ. ಹೆಚ್ಚಳಕ್ಕೆ ಪಟ್ಟು: ರೈತರು-ಒಕ್ಕೂಟಗಳ ರಕ್ಷಣೆಗೆ ಡಿ.ಕೆ. ಸುರೇಶ್ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

 ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಹಾಲು ಉತ್ಪಾದಕ ರೈತರ ಹಿತರಕ್ಷಣೆ ಮತ್ತು ಕ್ಷೀರೋತ್ಪಾದಕ ಒಕ್ಕೂಟಗಳ ಆರ್ಥಿಕ ಚೇತರಿಕೆಗಾಗಿ ತಕ್ಷಣವೇ ಪ್ರತಿ ಲೀಟರ್ ಹಾಲಿನ ದರವನ್ನು 10 ರೂಪಾಯಿ ಹೆಚ್ಚಿಸಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

ಈಗಾಗಲೇ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದ್ದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

10 ರೂ. ಏರಿಕೆಗೆ ಪಟ್ಟು

ಹಾಲು ಒಕ್ಕೂಟಗಳು ಮತ್ತು ರೈತರು ಮಂಡಿಸಿರುವ 10 ರೂ. ದರ ಏರಿಕೆಯ ಪ್ರಸ್ತಾವನೆಯಲ್ಲಿ 7 ರೂ. ನೇರವಾಗಿ ಹೈನುಗಾರಿಕೆ ಮಾಡುವ ರೈತರ ಕೈಸೇರಬೇಕು. ಉಳಿದ 3ರೂ.ಗಳನ್ನು ತೀವ್ರ ಆರ್ಥಿಕ ನಷ್ಟದಲ್ಲಿರುವ ಹಾಲು ಒಕ್ಕೂಟಗಳ ನಿರ್ವಹಣೆಗೆ ನೀಡಬೇಕು. ಪ್ರಸ್ತುತ ಕರ್ನಾಟಕದಲ್ಲಿ ಒಂದು ಲೀಟರ್ ನಂದಿನಿ ಹಾಲಿನ ಬೆಲೆ 46 ರೂಪಾಯಿ ಇದ್ದು, ಒಂದು ವೇಳೆ ಈ ಬೇಡಿಕೆ ಈಡೇರಿದರೆ ದರ 56 ರೂ.ಗೆ ಏರಿಕೆಯಾಗಲಿದೆ.

ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ

ಹಾಲು ಉತ್ಪಾದಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿರುವ ಡಿ.ಕೆ. ಸುರೇಶ್, ‘ಕಳೆದ 5-6 ತಿಂಗಳುಗಳಿಂದಲೂ ನಾವು ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದೇವೆ. ಜಾಗತಿಕ ವಿದ್ಯಮಾನಗಳು ಹಾಗೂ ಯುದ್ಧದ ಪರಿಸ್ಥಿತಿಯಿಂದಾಗಿ ಹೈನುಗಾರಿಕೆಯ ವೆಚ್ಚ ವಿಪರೀತ ಹೆಚ್ಚಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳು ನಾಲ್ಕು ತಿಂಗಳ ಹಿಂದೆಯೇ ಹಾಲಿನ ದರವನ್ನು ಹೆಚ್ಚಿಸಿವೆ. ಆದರೆ ನಮ್ಮ ರಾಜ್ಯದಲ್ಲಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ’ ಎಂದು ತಿಳಿಸಿದರು.

ಸಕ್ಕರೆ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳು ಹಾಗೂ ಪಶು ಆಹಾರದ ಬೆಲೆ ಗಗನಕ್ಕೇರಿದೆ. ರೈತರು ಪಡುತ್ತಿರುವ ಕಷ್ಟಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಈ ಹಿಂದೆ ಮೂರು ಮತ್ತು ನಾಲ್ಕು ರೂ. ಏರಿಕೆ ಮಾಡಿದಾಗ ಆ ಹಣ ಸಂಪೂರ್ಣವಾಗಿ ರೈತರಿಗೆ ತಲುಪಿತ್ತು. ಆದರೆ ಈಗ ಒಕ್ಕೂಟಗಳೂ ಸಹ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ:

ಸದನದಲ್ಲೂ ಕೃಷಿಕರ ಪರ ಧ್ವನಿ

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಮೂಲೆಮೂಲೆಗಳಿಂದ ಬಂದ ಹಾಲು ಉತ್ಪಾದಕರು ಹಾಗೂ ಮಿಲ್ಕ್ ಪ್ರೊಡ್ಯೂಸರ್ ಸೊಸೈಟಿಗಳು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಎಲ್ಲಾ ಶಾಸಕರಿಗೂ ಪ್ರತ್ಯೇಕವಾಗಿ ಮನವಿ ಪತ್ರಗಳನ್ನು ಕೊಡಲಾಗಿದ್ದು, ಕೃಷಿಕರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ ಎಲ್ಲಾ ಜನಪ್ರತಿನಿಧಿಗಳಿಗೆ ಡಿ.ಕೆ. ಸುರೇಶ್ ಧನ್ಯವಾದ ತಿಳಿಸಿದ್ದಾರೆ.

ಹಾಲಿನ ದರ ಸಮರ್ಪಕವಾಗಿ ಏರಿಕೆಯಾದರೆ ಹಳ್ಳಿಗಳಲ್ಲಿರುವ ನಿರುದ್ಯೋಗಿ ಯುವಕರು ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Must Read