Wednesday, June 7, 2023

Latest Posts

ನಂದಿನಿ ವರ್ಸಸ್ ಅಮುಲ್ ಗದ್ದಲದ ಬಗ್ಗೆ ಸಹಕಾರಿ ಸಚಿವರು ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಗುಜರಾತಿನ ಅಮುಲ್ ಉತ್ಪನ್ನಗಳು ಕರ್ನಾಟಕದಲ್ಲಿ ಮಾರಾಟವಾಗಲಿರುವ ಸಂಗತಿಗಳನ್ನೇ ಇರಿಸಿಕೊಂಡು ‘ನಂದಿನಿ ಉಳಿಸಿ’ ಎಂಬ ಧ್ವನಿ ಎತ್ತಿರುವವರ ಮುಂದೆ ಭಾನುವಾರದ ತಮ್ಮ ಪತ್ರಿಕಾಗೋಷ್ಟಿ ಮೂಲಕ ಹಲವು ಸತ್ಯಗಳನ್ನು ಮುಂದಿರಿಸಿದ್ದಾರೆ ರಾಜ್ಯದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್.

ಈಗ ಕೊರೆ ಕಾಲ, ಹಾಲು ಉತ್ಪಾದನೆ ಬೇಸಿಗೆ ಕಾಲದಲ್ಲಿ ಕಡಿಮೆ ಎಂದಿರುವ ಸಚಿವರು ಉಳಿದಂತೆ ಕೆಎಂಎಫ್ ಬುನಾದಿ ಕರ್ನಾಟಕದಲ್ಲಿ ಭದ್ರವಾಗಿದೆ ಹಾಗೂ ಅಮುಲ್ ಜತೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಆಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂದಿನಿ ಸುಭದ್ರ ಎಂಬ ಬಗ್ಗೆ ಸಚಿವರು ಹಲವು ಅಂಶಗಳನ್ನು ಮುಂದಿಟ್ಟಿದ್ದಾರೆ.

ಕರ್ನಾಟಕದಲ್ಲಿವೆ 15 ಮಿಲ್ಕ್‌ ಯೂನಿಯನ್‍ಗಳು

ಕರ್ನಾಟಕದಲ್ಲಿ 15 ಮಿಲ್ಕ್ ಯೂನಿಯನ್‍ಗಳಿವೆ, ಎಲ್ಲವೂ ಲಾಭದಲ್ಲಿವೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ಅದಕ್ಕೆ ಬೇಕಾದ ಹಣವನ್ನು ಕೆಎಂಎಫ್‍ಗೆ ಕೊಡಲಾಗಿತ್ತು. ಮಿಗತೆ ಹಾಲು ಉಚಿತವಾಗಿ ಕೊಡಲು ಆದೇಶ ಮಾಡಿದ್ದಾಗಿ ವಿವರಿಸಿದರು.

ವಿಶ್ವದಾದ್ಯಂತ ವಹಿವಾಟು, ಸ್ಪರ್ಧೆ ಎದುರಿಸಲಿದೆ ನಂದಿನಿ

ಕೆಎಂಎಫ್‍ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್ ಜೊತೆ ಚರ್ಚಿಸಲು ತಿಳಿಸಿದ್ದಾಗಿ ವಿವರಿಸಿದರು.

ನಂದಿನಿ ಸೊಸೈಟಿಗಳು 25- 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್, ಇಲ್ಲಿನ ಮಿಲ್ಕ್ ಯೂನಿಯನ್‍ಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ನುಡಿದರು.

ಅಮೂಲ್ ಹಾಲನ್ನು ಆನ್‍ಲೈನ್ ಮೂಲಕ ಲೀಟರ್‌ಗೆ 57 ರೂ.ಗೆ ಮಾರಾಟ ಮಾಡಿದರೆ, ನಾವು 39 ರೂಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ ಎಂದು ವಿವರಿಸಿದರು.

ನಂದಿನಿ ಬ್ರ್ಯಾಂಡ್‌ ಅಳಿಸಲು ಅಸಾಧ್ಯ

ನಂದಿನಿ ಬ್ರ್ಯಾಂಡ್ ಅಳಿಸಲು ಅಸಾಧ್ಯ. ಸರಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದೆ. ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ. ಗುಜರಾತ್, ಕರ್ನಾಟಕ ಎರಡೂ ಕಡೆ ಮಿಲ್ಕ್ ಯೂನಿಯನ್‍ಗಳು ಬಲಾಢ್ಯವಾಗಿವೆ. ಆಂಧ್ರಕ್ಕೆ ಲಾಡು ತಯಾರಿಸಲು ನಮ್ಮ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದರು.

ಕರ್ನಾಟಕದಲ್ಲಿ ಕೆಎಂಎಫ್‌ಗಿದೆ ಭದ್ರ ಬುನಾದಿ

ಕೆಎಂಎಫ್ ಬಗ್ಗೆ ತಿಳಿದವರು ಇದರ ಕುರಿತು ತಪ್ಪಾಗಿ ಮಾತನಾಡಲು ಅಸಾಧ್ಯ. ಕರ್ನಾಟಕದಲ್ಲಿ ಭದ್ರ ಬುನಾದಿ ಈ ಸಂಸ್ಥೆಗೆ ಇದೆ. ಅಮೂಲ್ ಸ್ಪರ್ಧೆ ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಬಳ್ಳಾರಿ, ಹಾವೇರಿ, ಮಂಡ್ಯದಲ್ಲಿ ಮೆಗಾ ಡೈರಿ ಆಗಿದೆ. ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಕೆಎಂಎಫ್ ಅಭದ್ರತೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಕೃಷ್ಣಪ್ಪನವರ ಕಾಲದಿಂದ ಇವತ್ತಿನವರೆಗೂ ಹಣಕಾಸು ಭದ್ರವಾಗಿದೆ. ಎಲ್ಲ ಮಿಲ್ಕ್ ಯೂನಿಯನ್‍ಗಳೂ ಲಾಭದಲ್ಲಿವೆ. ಹಾಲು ಮತ್ತು ಹಾಲಿನ ಉತ್ಪನ್ನದ ವಿಚಾರದಲ್ಲಿ ಕೃತಕ ಅಭಾವ ಸೃಷ್ಟಿಸಿಲ್ಲ. ಇದು ವೃಥಾ ಆರೋಪ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಸಹಕಾರಿ ಇಲಾಖೆ ಒಪ್ಪಿಗೆ ಇಲ್ಲದೆ ವಿಲೀನ ಅಸಾಧ್ಯ, ಈಗಿನದ್ದು ರಾಜಕೀಯ ಪ್ರೇರಿತ ಗದ್ದಲ

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಕೆ.ಎಂ.ಎಫ್ ಸರಿಸುಮಾರು 20 ರಿಂದ 22 ಸಾವಿರ ಕೋಟಿ ವಹಿವಾಟು ನಡೆಸುತ್ತದೆ. ಸಹಕಾರಿ ಇಲಾಖೆ ಒಪ್ಪಿಗೆ ಇಲ್ಲದೆ, ಮಾತುಕತೆ ಇಲ್ಲದೆ ಇನ್ನೊಂದು ರಾಜ್ಯದ ಸಂಸ್ಥೆ ಜೊತೆ ವಿಲೀನ ಅಸಾಧ್ಯ. ಮಹಾಸಭೆಯ ಒಪ್ಪಿಗೆ, ಕ್ಯಾಬಿನೆಟ್ ಒಪ್ಪಿಗೆ ಬೇಕು ಎಂದರು. ಬೆಳವಣಿಗೆಗಾಗಿ ತಂತ್ರಜ್ಞಾನದ ಸಹಕಾರ ಸ್ವಾಗತಾರ್ಹ ಎಂದು ತಿಳಿಸಿದರು.

ಕೆಎಂಎಫ್ ಉತ್ಪಾದನೆಗಳು ದೇಶದ 12 ರಾಜ್ಯಗಳಲ್ಲಿ ಮಾರಾಟ ಆಗುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ. ಕನ್ನಡ- ಮಾರವಾಡಿಗಳು ಎಂಬ ಶಬ್ದ ಬಳಸಿ ಮಾಜಿ ಸಿಎಂಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಜೆಡಿಎಸ್‍ನ ಕುಮಾರಸ್ವಾಮಿ ಅವರು ಜವಾಬ್ದಾರಿರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!