ಪ್ರಾಕೃತಿಕ ವಿಕೋಪ ನಿರ್ವಹಣೆ: ನೋಡಲ್ ಅಧಿಕಾರಿಗಳಿಗೆ ಅಣಕು ಪ್ರದರ್ಶನದ ಮೂಲಕ ತರಬೇತಿ

ಹೊಸ ದಿಗಂತ ವರದಿ, ಕುಶಾಲನಗರ:

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟುವ ಮತ್ತು ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಕುರಿತಾದ ಅಣಕು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಗುರುವಾರ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಸಲಾಯಿತು.
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟುವ, ಅತಿವೃಷ್ಟಿಯಲ್ಲಿ ಸಿಲುಕಿದವರನ್ನು ಕಾಪಾಡುವ ಮತ್ತು ನೆರೆ ಹಾವಳಿ, ಭೂಕುಸಿತದಿಂದಾಗುವ ಅನಾಹುತ ತಡೆಯಲು ಬೇಕಾಗುವ ಹಾಗೂ ನೀರಿನ ಸೆಳೆತಕ್ಕೆ ಸಿಲುಕಿ, ಮುಳುಗುತ್ತಿರುವವರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ ಬೋಟ್’ಗಳಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಕುಳಿತು ಹಿನ್ನೀರಿನ ಪ್ರದೇಶದಲ್ಲಿ ಸಂಚರಿಸಿದರು.
ಅಗ್ನಿಶಾಮಕ ದಳ, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೀರಿನಲ್ಲಿ ಸಿಲುಕಿ ಮುಳುಗುವ ವ್ಯಕ್ತಿಯ ರಕ್ಷಣೆಯ ಬಗ್ಗೆ ಅಣಕು ಪ್ರದರ್ಶನ ಮತ್ತು ‌ನೆರೆಹಾವಳಿ ಮತ್ತು ಭೂಕುಸಿತದ ಸಂದರ್ಭದಲ್ಲಿ ಆಗುವ ಅನಾಹುತಗಳಲ್ಲಿ ಸಿಲುಕಿದ ವ್ಯಕ್ತಿಗಳನ್ನು ರಕ್ಷಣೆ ಮಾಡುವ ವಿಧಾನದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಿದರು.
ಅಣಕು ಪ್ರದರ್ಶನದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ನೇಮಕಗೊಂಡಿರುವ 5 ತಾಲೂಕಿನ 20 ನೋಡಲ್ ಅಧಿಕಾರಿಗಳು, 16 ಹೋಬಳಿ ಮತ್ತು ಮೂರು ಪಟ್ಟಣ ಪಂಚಾಯತಿ, ಒಂದು ನಗರಸಭೆಯ ವ್ಯಾಪ್ತಿಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಿಲ್ಲಾ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, 5 ತಾಲೂಕಿನ ತಹಶಿಲ್ದಾರರು ಮತ್ತು ಮತ್ತು ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳು, ಜಿಲ್ಲೆ ,ತಾಲೂಕು , ಪಟ್ಟಣ ಪಂಚಾಯತಿ, ಹೋಬಳಿ ಕೇಂದ್ರಗಳ ಅಧಿಕಾರಿ ವರ್ಗದವರು ಮತ್ತು ಈಗಾಗಲೇ ವಿವಿಧ ಭಾಗಗಳಿಗೆ ನೇಮಕವಾಗಿವಾಗಿರುವ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!