October 4, 2026
Sunday, October 4, 2026
spot_img

ಪಾಕ್ ಏಜೆಂಟ್‌ನ ಹನಿಟ್ರ್ಯಾಪ್‌ ನಲ್ಲಿ ನೌಕಾಪಡೆ ಅಧಿಕಾರಿ: ಸೂಕ್ಷ್ಮ ಮಾಹಿತಿ ಸೋರಿಕೆ ಆರೋಪದಲ್ಲಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

​ಪಾಕಿಸ್ತಾನದ ಗುಪ್ತಚರ ಜಾಲದೊಂದಿಗೆ ಸಂಪರ್ಕ ಹೊಂದಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ 31 ವರ್ಷದ ನೌಕಾಪಡೆ ಸಿಬ್ಬಂದಿಯೊಬ್ಬರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.

ಬಂಧಿತನನ್ನು ಪ್ರದೀಪ್ ಮುಖರ್ಜಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾ ಕಮಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್, ಕೊಯಮತ್ತೂರಿನ ಐಎನ್‌ಎಸ್ ಅಗ್ರಣಿಯಲ್ಲಿ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಕೋರ್ಸ್‌ಗೆ ಹಾಜರಾಗಿದ್ದಾಗ ಶನಿವಾರ ಅವರನ್ನು ಬಂಧಿಸಲಾಗಿದ್ದು, ಗಂಭೀರ ಸ್ವರೂಪದ ಗುಪ್ತಚರ ಚಟುವಟಿಕೆಗಳ ಕುರಿತು ತನಿಖೆ ಮುಂದುವರಿದಿದೆ.

ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ

ಅಧಿಕಾರಿಗಳ ಪ್ರಕಾರ, ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್‌ನೊಂದಿಗೆ ಪ್ರದೀಪ್ ಸಂಪರ್ಕ ಬೆಳೆಸಿಕೊಂಡಿದ್ದರು. ಕಳೆದ ಕೆಲವು ತಿಂಗಳಿಂದ ಇವರಿಬ್ಬರ ನಡುವೆ ಸಂಪರ್ಕವಿದ್ದು, ಈ ಅವಧಿಯಲ್ಲಿ ವಿಶಾಖಪಟ್ಟಣಂ ನೌಕಾ ನೆಲೆ, ನೌಕಾಪಡೆಯ ಕಾರ್ಯಾಚರಣೆ ಹಾಗೂ ವ್ಯೂಹಾತ್ಮಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವ ಆರೋಪ ಕೇಳಿಬಂದಿದೆ. ನೌಕಾಪಡೆಯ ಹಡಗುಗಳ ಚಲನವಲನ ಮತ್ತು ಕಾರ್ಯಾಚರಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯೂ ಸೋರಿಕೆಯಾಗಿರುವ ಶಂಕೆ ಇದೆ.

ಇದನ್ನೂ ಓದಿ:

ಆಂಧ್ರಪ್ರದೇಶ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಈ ಪ್ರಕರಣದ ಡಿಜಿಟಲ್ ಚಟುವಟಿಕೆಗಳನ್ನು ಗಮನಿಸುತ್ತಿದ್ದು, ಅದರ ಆಧಾರದ ಮೇಲೆ ತನಿಖೆ ಮುಂದುವರಿಸಿ ಬಂಧನ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರದೀಪ್ 2014ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದರು.

ಈ ಹಿಂದೆಯೂ ನೌಕಾಪಡೆ ಸಿಬ್ಬಂದಿ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸೂಕ್ಷ್ಮ ಮಾಹಿತಿ ನೀಡಿದ ಆರೋಪದಲ್ಲಿ ಮತ್ತೊಬ್ಬ ನೌಕಾಪಡೆ ಸಿಬ್ಬಂದಿ ಲಾನ್ಸ್ ನಾಯಕ್ ಆದರ್ಶ್ ಕುಮಾರ್ ಅಲಿಯಾಸ್ ಲಕ್ಕಿ ಅವರನ್ನು ಮಾರ್ಚ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. ತನಿಖೆಯ ವೇಳೆ ನೌಕಾ ಹಡಗುಗಳು ಹಾಗೂ ಪ್ರಮುಖ ನೌಕಾ ಸ್ಥಾವರಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿರುವ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.

ಪ್ರಸ್ತುತ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ಪ್ರದೀಪ್ ಯಾರೊಂದಿಗೆ ಸಂಪರ್ಕದಲ್ಲಿದ್ದರು, ಯಾವ ರೀತಿಯ ಮಾಹಿತಿ ಹಂಚಿಕೆಯಾಗಿದೆ ಹಾಗೂ ಅದರ ಹಿಂದೆ ಯಾವುದೇ ದೊಡ್ಡ ಗುಪ್ತಚರ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿವೆ.

Must Read