ಆರ್ ಎಸ್ಎಸ್ ಸಂಘಟನೆಯನ್ನು ನೆಹರು,ಗಾಂಧೀಜಿ ಶ್ಲಾಘಿಸಿದ್ದರು : ದಮ್ಮೂರ್ ಶೇಖರ್

ಹೊಸದಿಗಂತ ವರದಿ ಬಳ್ಳಾರಿ:

ದೇಶಾಭಿಮಾನ, ಹಿಂದೂ ಸಂಸ್ಕೃತಿ ಉಳಿವಿಗಾಗಿ ಆರ್ ಎಸ್ ಎಸ್ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಮಹಾತ್ಮಾ ಗಾಂಧೀಜಿ ಅವರೇ ಶ್ಲಾಘಿಸಿದ್ದರು, ಹೀಗಿರುವಾಗ ಕಾಂಗ್ರೆಸ್ ಕೆಲ ನಾಯಕರು ಪುಕ್ಕಟೆ ಪ್ರಚಾರ ಪಡೆಯಲು ಆರ್ ಎಸ್ ಎಸ್ ನಿಷೇಧ ಮಾಡಲಿ ಎನ್ನುವುದು ಸರಿಯಲ್ಲ ಎಂದು ಬೂಡಾ ಮಾಜಿ ಅದ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಮ್ಮೂರ್ ಶೇಖರ್ ಅವರು ಹೇಳಿದರು.

ಈ ಕುರಿತು ಗುರುವಾರ ಮಾತನಾಡಿದ ಅವರು, ದೇಶದ್ರೋಹಿ ಕೆಲಸ, ಗಲಭೆ, ಅಶಾಂತಿ ಸೃಷ್ಟಿ ಸೇರಿದಂತೆ ನಾನಾ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಪಿಎಫ್ಐ ಸಂಘಟನೆಯನ್ನು ಸರ್ಕಾರ 5 ವರ್ಷಗಳ ಕಾಲ ನಿಷೇಧ ಮಾಡಿದೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನ ಕೆಲವರು ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಹೇಳಿಕೆ ನೀಡುವುದು ಖಂಡನೀಯ. ಕಾಂಗ್ರೆಸ್ ನವರಿಗೆ ದೇಶದ ಹಿತ ಬೇಕಾಗಿಲ್ಲ, ಅಭಿವೃದ್ಧಿ ಬೇಕಿಲ್ಲ, ಅವರಿಗೆ ಅಧಿಕಾರ ಮುಖ್ಯ, ಅಧಿಕಾರಕ್ಕಾಗಿ ಯಾವ ಕೆಲಸ ಮಾಡಲು ಹಿಂದೂ ಮುಂದು ನೊಡೋಲ್ಲ, ಅಂತಹ ಕೆಳಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ನಾಯಕರು ಇಳಿದಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಪ್ಐ ಸಂಘಟನೆ ಮುಖಂಡರ ಮೇಲಿದ್ದ 123ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕೋಮುವಾದಿಗಳಿಗೆ ರಕ್ಷಣೆ ನೀಡಿದ್ದಾರೆ, ಇದಕ್ಕಿಂತ ಇನ್ನೇನು ಬೇಕು, ಎಸ್ ಡಿಪಿಐ, ಪಿಎಫ್ಐ ಗೆ ದೇಶದ್ರೋಹಿ ಕೆಲಸ ಮಾಡಲು ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್, ಅಶಾಂತಿ ಸೃಷ್ಟಿ ಹಾಗೂ ಕೋಮು ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಟೀಕಿಸಿದರು.

ಆರ್ ಎಸ್ ಎಸ್ ಸಂಘಟನೆ ದೇಶಾದ್ಯಂತ ಒಳ್ಳೆಯ ಕೆಲಸ ಮಾಡುತ್ತಿದೆ, ಸಂಘಟನೆ ಕಾರ್ಯವೈಖರಿ, ಡಬಲ್ ಎಂಜಿನ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಹಿಸದ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದೆ. ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದ್ದು, ಹತಾಷೆಯಿಂದ ಕಾಂಗ್ರೆಸ್ ನ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರೇ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕಳೆದ 1947 ಸೆ.16 ರಂದು ದಿಲ್ಲಿಯಲ್ಲಿ ನಡೆದ ಆರ್ ಎಸ್ ಎಸ್ ಶಿಬಿರದಲ್ಲಿ ಮಹಾತ್ಮ ಗಾಂಧೀಜೀ ಅವರು, ಭಾಗವಹಿಸಿದಾಗ, ಅಲ್ಲಿನ ಶಿಸ್ತು ಮತ್ತು ಅಲ್ಲಿ ಅಸ್ಪೃಶ್ಯತೆ ಲವಲೇಶವೂ ಇಲ್ಲದಿರವುದನ್ನು ಕಂಡು ನಾನು ತುಂಬಾ ಪ್ರಭಾವಿತನಾದೆ ಎಂದು ಹೇಳಿದ್ದರು, ಇತರರ ಜಾತಿ ತಿಳಿಯುವ ಗೊಡವೆಯೇ ಇಲ್ಲದ, ಸಂಪೂರ್ಣ ಸಮಾನತೆ ಸಹೋದರತೆಗಳ ಭಾವನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರು, ವ್ಯವಹರಿಸುವದನ್ನು ಕಂಡು ನನಗೆ ಆಶ್ಚರ್ಯವೆನಿಸಿದೆ ಎಂದು ಕಳೆದ 1939ರಲ್ಲಿ ಪುಣೆಯಲ್ಲಿ ನಡೆದ ಆರ್ ಎಸ್ ಎಸ್ ಶಿಬಿರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಿರುವಾಗ ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ನಿಷೇಧಿಸಬೇಕು ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!