ಪೆರಡಾಲ ಶಾಲೆ ಅಂಗಳಕ್ಕೆ ಬಂದಿಳಿದು ಅಚ್ಚರಿ ಮೂಡಿಸಿದ್ರು ನೀಲ್‌ ಆಮ್೯ ಸ್ಟ್ರಾಂಗ್ ಟೀಮ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೊಡು ಜಿಲ್ಲೆಯ ಬದಿಯಡ್ಕ ಸಮೀಪದ ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ಅಸೆಂಬ್ಲಿ ವೇಳೆ ಚಂದ್ರಯಾನದ ‘ಗಗನಯಾತ್ರಿ’ಗಳು ದಿಢೀರ್ ಪ್ರತ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ಸಪ್ರೈಜ್ ನೀಡಿದರು! ಅಚ್ಚರಿಗೊಂಡರೂ ಬಳಿಕ ಸುಧಾರಿಸಿಕೊಂಡ ಮಕ್ಕಳು ಈ ‘ಗಗನಯಾನಿ’ಗಳಲ್ಲಿ ಚಂದ್ರನ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯ ನಿವಾರಿಸಿಕೊಂಡರು.

ಅಂದಹಾಗೆ ಇದು ರಿಯಲ್‌ ಗಗನಯಾತ್ರಿಗಳಲ್ಲ. ಚಂದ್ರ ದಿನಾಚರಣೆ ಹಿನ್ನಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಶಾಲೆಯಲ್ಲಿ ವಿಶಿಷ್ಟವಾಗಿ ಹಮ್ಮಿಕೊಂಡ ಕಾರ್ಯಕ್ರಮವಾಗಿತ್ತು. ಗಗನಯಾತ್ರಿಗಳ ದಿರಿಸು ಧರಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೂಹ ಮಾರ್ಗದರ್ಶನ ನೀಡಿತ್ತು.

ಮುಖ್ಯ ಶಿಕ್ಷಕ ರಾಜಗೋಪಾಲ್, ಶಾಲಾ ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ, ಸದಸ್ಯ ಶರೀಫ್, ಗೋಪಾಲ ಕೃಷ್ಣ ಭಟ್, ಶ್ರೀಧರ್ ಭಟ್, ಶ್ರೀಧರನ್, ಸಿಜಿ ತೋಮಸ್, ಜಯಲತಾ ಸಹಿತ ಎಲ್ಲಾ ಶಿಕ್ಷಕ ವೃಂದ ಮಕ್ಕಳಿಗೆ ಪೂರಕ ವಾತಾವರಣ ಒದಗಿಸಿಕೊಟ್ಟರು.

ಇದೇ ವೇಳೆ ಮಕ್ಕಳಿಂದ ಚಂದ್ರಯಾನದ ಕುರಿತು ಭಾಷಣ, ಹಾಡು, ವಿಡಿಯೋ ಪ್ರದರ್ಶನ, ಚಿತ್ರ ರಚನೆ, ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!