ಇಷ್ಟು ಸಪ್ಪೆ ಭಾಷಣ ಇನ್ನೆಲ್ಲೂ ಕೇಳಿರಲಿಲ್ಲ: ರಾಜ್ಯಪಾಲರ ಭಾಷಣಕ್ಕೆ ಬೊಮ್ಮಾಯಿ ರಿಯಾಕ್ಷನ್

ಹೊಸದಿಗಂತ ವರದಿ ಬೆಂಗಳೂರು:

ಇಂದು ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನದ ಆರಂಭದ ದಿನವಾಗಿದ್ದು, ಜಂಟಿ ಅಧಿವೇಷನ ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದ್ದಾರೆ. ಇದೊಂದು ಸಪ್ಪೆ ಭಾಷಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಷ್ಟು ಸಪ್ಪೆ, ನಿರಾಸೆಯ ಭಾಷಣ ಯಾವತ್ತೂ ಕೇಳಿರಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಜನವಿರೋಧಿ ಸರ್ಕಾರ ಇರುವುದನ್ನು ಈ ಭಾಷಣ ತೋರಿಸುತ್ತದೆ. ಯಾವುದೇ ವಿಚಾರದಲ್ಲಿ ಸಾಧನೆ ಮಾಡಿರುವುದು ಕಾಣಿಸುವುದಿಲ್ಲ. ನಾವು ಮಾಡಿರುವ ಯೋಜನೆಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ ಎಂದರು.

ಜಲಜೀವನ್ ಮಿಷನ್ ,ಮನೆ ನಿರ್ಮಾಣ ಎಲ್ಲವೂ ನಮ್ಮ ಯೋಜನೆಗಳು. ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ನಮ್ಮ ಅವಧಿಯಲ್ಲಿ ಆರಂಭಿಸಿಧ್ದೇವೆ ಅದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದಾರೆ. ನೀರಾವರಿಗೆ 10 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾವ ಯೋಜನೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ದಾಖಲೆ ನೀಡಲಿ. ತಮ್ಮ ಬೆನ್ನು ತಾವೆ ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ತಿರುಗಾಡದಂತಹ ಪರಿಸ್ಥಿತಿ ಇದೆ. ಅವರನ್ನು ಕೇಳಿದರೆ ಸರ್ಕಾರದ ಸಾಧನೆ ಏನು ಅನ್ನೋದು ಗೊತ್ತಾಗುತ್ತದೆ. ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ. ಡಿಸಿ ಅಕೌಂಟ್ ನಲ್ಲಿ ಹಣ ಇದೆ ಅಂತಾರೆ ಅವರು ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕೇಂದ್ರದ ಅನುದಾನದ ಕುರಿತು ಸದನದಲ್ಲಿ ಚರ್ಚೆ ಮಾಡುತ್ತೇವೆ. ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ. ಎನ್ ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎನ್ನುವುದು ದಾಖಲೆ ಇದೆ. ಕೇಂದ್ರದ ಆಯುಷ್ಮಾನ್ ಭಾರತ, ಜಲ ಜೀವನ್ ಮಿಷನ್ ಸೇರಿದಂತೆ ಅನೇಕ ಯೊಜನೆಗಳು ಜಾರಿಯಲ್ಲಿವೆ. ಬರೀ ಗ್ಯಾರೆಂಟಿಗಳನ್ನು ಜನ ಖುಷಿಯಾಗಿಲ್ಲ. ಎಷ್ಟೋ ಜನರಿಗೆ ಈಗಲೂ ಒಂದು ರೂಪಾಯಿ ಹಣವೂ ಬಂದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!