May 3, 2026
Sunday, May 3, 2026
spot_img

ತುಂಗಭದ್ರಾ ಡ್ಯಾಂಗೆ ಹೊಸ ಗೇಟ್ ಅಳವಡಿಕೆ: ಮೇ 15 ರಂದು ಉದ್ಘಾಟನೆ ಎಂದ ಡಿಸಿಎಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣವಾಗುತ್ತಿದೆ.

ಈ ಹಿನ್ನೆಲೆ ಇಂದು ಜಲಾಶಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಿ, ಹೊಸ ಗೇಟ್‌ಗಳ ಅಳವಡಿಕೆ ಕಾರ್ಯವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

2024ರ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಲಿಂಕ್ ಕಟ್ ಆಗಿ ಕೊಚ್ಚಿ ಹೋಗಿತ್ತು. ಇದರ ಬಳಿಕ ತಜ್ಞರ ಸಮಿತಿಯ ಸೂಚನೆಯಂತೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ 33 ಹಳೆಯ ಗೇಟ್‌ಗಳನ್ನು ತೆಗೆದು ಹೊಸ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು. ಇದೀಗ ಎಂಜಿನಿಯರ್‌ಗಳ ನಿರಂತರ ಪರಿಶ್ರಮದಿಂದಾಗಿ ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮೇ 15ರಂದು ಅಧಿಕೃತವಾಗಿ ಲೋಕಾರ್ಪಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, 54 ಕೋಟಿ ರೂಪಾಯಿ ವೆಚ್ಚದಲ್ಲಿ 33 ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ. ಹೊಸ ಗೇಟ್ ಅಳವಡಿಕೆ ಕಾಮಗಾರಿ ಮೇ 7ಕ್ಕೆ ಸಂಪೂರ್ಣಗೊಳ್ಳಲಿದ್ದು, ಮೇ 15ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಗೇಟ್ ಗಳಿಗೆ ಚೈನ್ ಅಳವಡಿಕೆ ಕಾರ್ಯ ಬಾಕಿ ಇದೆ. ತಮಿಳುನಾಡಿನ ಸಂಸ್ಥೆಗೆಈ ಕೆಲಸ ನಿರ್ವಹಿಸಲಿದ್ದಾರೆ.ಮೇ ಅಂತ್ಯಕ್ಕೆ ಚೈನ್ ಅಳವಡಿಕೆ ಕೂಡ ಪೂರ್ಣಗೊಳ್ಳಲಿದೆ ಎಂದರು.

ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಿದ್ದಕ್ಕೆ ರೈತರು ಸಂತೋಷವಾಗಿದ್ದಾರೆ. ಇದಕ್ಕೆ ಅಧಿಕಾರಿಗಳು, ರೈತರು ಹಾಗೂ ಎಲ್ಲರ ಸಹಕಾರವೇ ಕಾರಣವಾಗಿದೆ. ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿದ್ದಾರೆ, ಅವರಿಗೆ ನನ್ನ ಕೋಟಿ ನಮಸ್ಕಾರಗಳು. ಮುಂದಿನ 50 ವರ್ಷಗಳ ಕಾಲ ಈ ಜಲಾಶಯ ಭದ್ರವಾಗಿರಲಿದೆ. ಸಂಪೂರ್ಣ ಕಾಮಗಾರಿ ಮುಗಿದ ನಂತರ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ರೈತರನ್ನು ಕರೆಸಿ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !