ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಾಮಮಂದಿರದ ದೇಣಿಗೆ ಕಳ್ಳತನದ ವಿವಾದ ಇಡೀ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂದಿರದ ಆಡಳಿತ ಮತ್ತು ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಈ ನಿರ್ಧರ ಕೈಗೊಳ್ಳಲಾಗಿದೆ.
ಯಾರು ಈ ಜೀತೇಂದ್ರ ಮಿಶ್ರಾ?
ಡಿಸೆಂಬರ್ 1986 ರಲ್ಲಿ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದ ಇವರು, ಒಟ್ಟು 38 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಮೇ 2026 ರಲ್ಲಿ ನಿವೃತ್ತರಾಗಿದ್ದಾರೆ. ವಾಯುಪಡೆಯ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಇವರು ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಪುಣೆಯ ಎನ್‌ಡಿಎ, ಬೆಂಗಳೂರಿನ ಟೆಸ್ಟ್ ಪೈಲಟ್ಸ್ ಸ್ಕೂಲ್ ಸೇರಿದಂತೆ ಅಮೆರಿಕ ಹಾಗೂ ಬ್ರಿಟನ್‌ನ ಪ್ರತಿಷ್ಠಿತ ರಕ್ಷಣಾ ಕಾಲೇಜುಗಳಲ್ಲಿ ಇವರು ತರಬೇತಿ ಪಡೆದಿದ್ದಾರೆ. ಇವರ ಅತ್ಯುತ್ತಮ ಸೇವೆಗಾಗಿ ದೇಶದ ಉನ್ನತ ಸೇನಾ ಪ್ರಶಸ್ತಿಗಳಾದ ‘ಸರ್ವೋತ್ತಮ ಯುದ್ಧ ಸೇವಾ ಪದಕ’, ‘ಅತಿ ವಿಶಿಷ್ಟ ಸೇವಾ ಪದಕ’ ಹಾಗೂ ‘ವಿಶಿಷ್ಟ ಸೇವಾ ಪದಕ’ಗಳನ್ನು ನೀಡಿ ಗೌರವಿಸಲಾಗಿದೆ.
ಟ್ರಸ್ಟ್‌ನಲ್ಲಿ ಮಹತ್ವದ ಬದಲಾವಣೆಗಳು
ದೇಣಿಗೆ ವಿವಾದದ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸದ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ದೇಣಿಗೆ ಎಣಿಕೆ ವಿಭಾಗದ ಎಂಟು ಜನರನ್ನು ಬಂಧಿಸಲಾಗಿದೆ. ಆಡಳಿತ ಮಂಡಳಿಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಮದನ್ ಮೋಹನ್ ಪಾಂಡೆ, ಮಹೇಶ್ ಭಾಗ್ಚಂದ್ಕಾ, ನಿರ್ಮಲಾ ಯಾದವ್ ಈ ಮೂವರು ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:
ಆಯ್ಕೆ ಪ್ರಕ್ರಿಯೆ ಹೇಗಿತ್ತು?
ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಅರ್ಜಿದಾರರನ್ನು 600 ಅಂಕಗಳ ಕಠಿಣ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿತ್ತು. ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯಲ್ಲಿ ನಡೆದ ಅಂತಿಮ ಸಂದರ್ಶನದ ಬಳಿಕ, ಕಳಂಕರಹಿತ ಹಿನ್ನೆಲೆ ಹಾಗೂ ಅದ್ಭುತ ನಾಯಕತ್ವ ಗುಣ ಹೊಂದಿರುವ ಜೀತೇಂದ್ರ ಮಿಶ್ರಾ ಅವರನ್ನು ಈ ಮಹತ್ವದ ಹುದ್ದೆಗೆ ಅಂತಿಮಗೊಳಿಸಲಾಗಿದೆ.



