ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಗುರಿಯನ್ನು ಭಾರತವು ಎಂದಿಗೂ ಸಾಧಿಸುವುದಿಲ್ಲ. ಒಂದೊಮ್ಮೆ ಭಾರತ ದಾಳಿ ಮಾಡಿದರೆ ತನ್ನ ದೇಶವನ್ನು ರಕ್ಷಿಸಲು ಪಾಕಿಸ್ತಾನಿ ಪಡೆಗಳು ಸಿದ್ಧವಾಗಿವೆ ಎಂದು ಹೊಸದಾಗಿ ನೇಮಕಗೊಂಡ ಪಾಕ್ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಹೇಳಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ರಖ್ಚಿಕ್ರಿ ವಲಯದ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಚೊಚ್ಚಲ ಭೇಟಿ ನೀಡಿದ ಮುನೀರ್, “ನಾನು ಸ್ಪಷ್ಟವಾಗಿ ಹೇಳುತ್ತೇನೆ, ಪಾಕಿಸ್ತಾನದ ಸಶಸ್ತ್ರ ಪಡೆಗಳು ನಮ್ಮ ತಾಯ್ನಾಡಿನ ಪ್ರತಿಯೊಂದು ಇಂಚು ಭೂಮಿಯನ್ನು ರಕ್ಷಿಸಲು ಸಿದ್ಧವಾಗಿವೆ. ಯಾವುದೇ ತಪ್ಪುಗ್ರಹಿಕೆಯಿಂದ ಅಂತಹ ದುಸ್ಸಾಹಸಕ್ಕೆ ಕೈಹಾಕಿದರೆ ನಮ್ಮ ಸಶಸ್ತ್ರ ಪಡೆಗಳ ಸಂಪೂರ್ಣ ಶಕ್ತಿಯನ್ನು ಆ ರಾಷ್ಟ್ರವು ನೋಡಬೇಕಾಗುತ್ತದೆ ”ಎಂದು ಅವರು ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವಂತಹ ಆದೇಶಗಳನ್ನು ಕಾರ್ಯಗತಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದ ಕೆಲವು ದಿನಗಳ ನಂತರ ಮುನೀರ್ ಈ ಹೇಳಿಕೆ ನೀಡಿದ್ದಾರೆ.
ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ ಎಂದು ಕರೆದ ಪಾಕಿಸ್ತಾನದ ಸೇನಾ ಮುಖ್ಯಸ್ಥರು, ಭಾರತವು ಎಂದಿಗೂ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಅಕ್ಟೋಬರ್ 28 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ನವದೆಹಲಿಯ ಸಂಕಲ್ಪವನ್ನು ಪುನರುಚ್ಚರಿಸಿದ್ದರು. ಎಲ್ಲಾ ನಿರಾಶ್ರಿತರು ಭಾರತಕ್ಕೆ ಬರುವ ಆಸೆ ಹೊಂದಿದ್ದಾರೆ ಎಂದು ಅವರು ಹೇಳಿದ್ದರು.