August 21, 2026
Friday, August 21, 2026
spot_img

ಕೇರಳ ರಾಜಕಾರಣದಲ್ಲಿ ಹೊಸ ಕ್ರಾಂತಿ: ಮುಖ್ಯಮಂತ್ರಿ ಪ್ರಮಾಣವಚನಕ್ಕೂ ಮುನ್ನವೇ 21 ಸದಸ್ಯರ ಸಚಿವ ಸಂಪುಟ ಫೈನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜಕಾರಣದಲ್ಲಿ ಹೊಸ ಕ್ರಾಂತಿಯೇ ನಡೆದಿದ್ದು, ಮುಖ್ಯಮಂತ್ರಿ ಪ್ರಮಾಣವಚನಕ್ಕೂ ಮುನ್ನವೇ 21 ಸದಸ್ಯರ ಸಚಿವ ಸಂಪುಟವನ್ನು ಪ್ರಕಟಿಸಿದ್ದಾರೆ.

ನಾಳೆ ಕೇರಳದ ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಪ್ರಮಾಣವಚನ ಸ್ವೀಕಾರ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ತಮ್ಮ 21 ಸದಸ್ಯರ ಸಚಿವ ಸಂಪುಟವನ್ನು ಘೋಷಿಸಿದ್ದಾರೆ.

ಆರು ದಶಕಗಳ ಬಳಿಕ ಒಟ್ಟಿಗೆ ಪ್ರಮಾಣವಚನ

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶನ್, ನಾಳೆ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಆರು ದಶಕಗಳ ಬಳಿಕ ಸಂಪೂರ್ಣ ಸಚಿವ ಸಂಪುಟ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸುತ್ತಿದೆ ಎಂದು ತಿಳಿಸಿದರು.

ಈ ಸಂಬಂಧ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿಯಾಗಿ ತಮ್ಮನ್ನೂ ಒಳಗೊಂಡಂತೆ ಒಟ್ಟು 21 ಸಚಿವರ ಪಟ್ಟಿಯನ್ನು ನೀಡಿದರು.

ಯುಡಿಎಫ್ ಮೈತ್ರಿಕೂಟವು ಎಲ್ಲಾ ಪಕ್ಷಗಳಿಗೂ ಆದ್ಯತೆ ನೀಡಿದ್ದು, ಸುದೀರ್ಘ ಚರ್ಚೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅನುಮತಿ ಬಳಿಕ ಸಚಿವ ಸಂಪುಟದ ಸದಸ್ಯರ ಆಯ್ಕೆ ನಡೆದಿದೆ ಎಂದು ತಿಳಿಸಿದರು.

ರಮೇಶ್ ಚೆನ್ನಿತ್ತಲ ಗೆ ಒಲಿದ ಸಚಿವ ಸ್ಥಾನ

ಕಾಂಗ್ರೆಸ್ ನಿಂದ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್, ಸನ್ನಿ ಜೋಸೆಫ್, ಬಿಂಧು ಕೃಷ್ಣ, ಎ. ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ಎಂ. ಲಿಜು, ರೋಜಿ ಎಂ. ಜಾನ್, ಟಿ. ಸಿದ್ದಿಕ್, ಒ.ಜೆ. ಜನೀಶ್ ಮತ್ತು ಕೆ.ಎ. ತುಳಸಿ ಅವರನ್ನು ಸಂಪುಟಕ್ಕೆ ಸೇರಿಸಲಾಗಿದೆ.

ಐಯುಎಂಎಲ್ (IUML) ಪಕ್ಷವು ಪಿ.ಕೆ. ಕುಂಞಾಲಿಕುಟ್ಟಿ, ಪಿ.ಕೆ. ಬಶೀರ್, ಎನ್. ಶಂಸುದ್ದೀನ್, ಕೆ.ಎಂ. ಶಾಜಿ ಮತ್ತು ವಿ.ಇ. ಅಬ್ದುಲ್ ಗಫೂರ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಮಿತ್ರ ಪಕ್ಷಗಳಿಗೂ ಸಿಕ್ಕಿತು ಸ್ಥಾನ

ಇತರ ಮಿತ್ರ ಪಕ್ಷಗಳಾದ ಕೇರಳ ಕಾಂಗ್ರೆಸ್‌ನಿಂದ ಮೊನ್ಸ್ ಜೋಸೆಫ್, ಆರ್‌ಎಸ್‌ಪಿಯಿಂದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ (ಜಾಕಬ್)ನಿಂದ ಅನೂಪ್ ಜಾಕಬ್ ಮತ್ತು ಸಿಎಂಪಿಯಿಂದ ಸಿ.ಪಿ. ಜಾನ್ ಅವರನ್ನು ಸಂಪುಟಕ್ಕೆ ಸೇರಿಸಲಾಗಿದೆ.

ಹಿರಿಯ ಶಾಸಕ ತಿರುವಂಚೂರ್ ರಾಧಾಕೃಷ್ಣನ್ ವಿಧಾನಸಭೆಯ ಸ್ಪೀಕರ್ ಆಗಲಿದ್ದಾರೆ ಹಾಗೂ ಶಾನಿಮೋಲ್ ಉಸ್ಮಾನ್ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !