ಹೊಸದಿಗಂತ ಮಡಿಕೇರಿ:
ಯಾರೂ ವಾಸವಿಲ್ಲದ ಲೈನ್ ಮನೆಯಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ಬಲ್ಲಮಾವಟಿಯಲ್ಲಿ ನಡೆದಿದೆ. ಬಲ್ಲಮಾವಟ್ಟಿ ಪೇರೂರು ಗ್ರಾಮದ ತೋಳಂಡ ಪೂಣಚ್ಚ ಅವರ ಲೈನ್ ಮನೆಯಲ್ಲಿ ಶನಿವಾರ ರಾತ್ರಿ 9.45ರ ಸುಮಾರಿಗೆ ಹೆಣ್ಣು ಶಿಶು ಪತ್ತೆಯಾಗಿದ್ದು, ಕೇವಲ ಒಂದೆರಡು ಗಂಟೆಗಳ ಮೊದಲು ಜನಿಸಿರಬೇಕೆಂದು ಹೇಳಲಾಗಿದೆ.
ಯಾರೂ ವಾಸವಿಲ್ಲದ ಲೈನ್’ಮನೆಯಲ್ಲಿ ಬಟ್ಟೆಯಲ್ಲಿ ಸುತ್ತಿದ್ದ ಶಿಶುವನ್ನು ಯಾರೋ ಬಿಟ್ಟು ಹೋಗಿದ್ದು, ಮಗುವನ್ನು ಇರುವೆಗಳು ಮುತ್ತಿದ್ದವು. ಮಗುವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಮಗುವನ್ನು ರಕ್ಷಿಸಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ.
ಪ್ರಥಮ ಚಿಕಿತ್ಸೆ ಬಳಿಕ ಮಗುವನ್ನು ಆಂಬ್ಯುಲೆನ್ಸ್’ನಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ನಾಪೋಕ್ಲು ಪೊಲೀಸರು ಮಗುವಿನ ಪೋಷಕರಿಗಾಗಿ ಶೋಧ ನಡೆಸಿದ್ದಾರೆ.