ನ್ಯೂಸ್‌ ಕ್ಲಿಕ್‌ ಸಂಸ್ಥೆ ಪೋಲೀಸರ ದಾಳಿ: I.N.D.I.A ಒಕ್ಕೂಟ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ವಿಚಾರಧಾರೆಗಳನ್ನು ‍ಪ್ರಚುರಪಡಿಸಲು ಭಾರೀ ಹಣ ಪಡೆದಿದೆ ಎನ್ನುವ ಆರೋಪದ ಮೇಲೆ ಯುಎಪಿಎ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನ್ಯೂಸ್‌ ಕ್ಲಿಕ್‌ ಸಂಸ್ಥೆ ಹಾಗೂ ಅದರ ಪತ್ರಕರ್ತರಿಗೆ ಸೇರಿದ 30 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿತ್ತು.‌

ಈ ದಾಳಿಯನ್ನು ವಿರೋಧ ‍ಪಕ್ಷಗಳ ‘ಇಂಡಿಯಾ’ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಆಡಳಿತ ಪಕ್ಷದ ವಿರುದ್ಧ ಸತ್ಯ ಮಾತನಾಡುವವರ ವಿರುದ್ಧ ಮಾತ್ರ ಬಿಜೆ‍ಪಿ ಸರ್ಕಾರ ಬಲವಂತದ ಕ್ರಮ ತೆಗೆದುಕೊಳ್ಳುತ್ತಿದೆ.ದೇಶದಲ್ಲಿ ದ್ವೇಷ ಹರಡುವವರ ಹಾಗೂ ವಿಭಜಕ ನೀತಿ ಅನುಸರಿಸುತ್ತಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಟೀಕಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ‘ಇಂಡಿಯಾ’ ಪಕ್ಷಗಳ ಒಕ್ಕೂಟವು, ಮಾಧ್ಯಮ ಸಂಸ್ಥೆಗಳನ್ನು ತಮ್ಮ ಆತ್ಮೀಯ ಬಂಡವಾಳಶಾಹಿಗಳು ಸ್ವಾಧೀನಪಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಮೂಲಕ ಮಾಧ್ಯಮವನ್ನು ತನ್ನ ಪಕ್ಷಪಾತ ಮತ್ತು ಸೈದ್ಧಾಂತಿಕ ಹಿತಾಸಕ್ತಿಗಳ ಮುಖವಾಣಿಯನ್ನಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದೆ.

ಸರ್ಕಾರವು ಮಾಧ್ಯಮಗಳನ್ನು ತನ್ನ ಮುಖವಾಣಿಯನ್ನಾಗಿ ಮಾಡಿ, ತನ್ನ ಪಕ್ಷಪಾತಿ ನಿಲುವು ಹಾಗೂ ಸಿದ್ಧಾಂತಗಳಿಗಾಗಿ ತಮ್ಮ ಆತ್ಮೀಯ ಬಂಡವಾಳಶಾಹಿಗಳು ಖರೀದಿ ಮಾಡುವ ವ್ಯವಸ್ಥೆ ಮಾಡಿಕೊಡುತ್ತಿದೆ ಎಂದು ಕಿಡಿ ಕಾರಿದೆ.

‘ಸರ್ಕಾರ ಹಾಗೂ ಅವರ ಸಿದ್ಧಾಂತವನ್ನು ಪ್ರತಿಪಾದಿಸುವವರು ತಮ್ಮ ವಿರುದ್ಧ ಸತ್ಯ ಮಾತನಾಡುವವರ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಕೈಹಾಕಿದ್ದಾರೆ. ಇದಲ್ಲದೆ, ಬಿಜೆಪಿ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮ 2021ರ ಮೂಲಕ, ಮಾಧ್ಯಮಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುವುದನ್ನು ನಿರ್ಬಂಧಿಸಿದೆ. ಹಾಗೆ ಮಾಡುವುದರ ಮೂಲಕ ಬಿಜೆಪಿ ತನ್ನ ಲೋಪದೋಷಗಳು ಮತ್ತು ಪಾಪಗಳನ್ನು ಭಾರತದ ಜನರಿಂದ ಮರೆಮಾಚುತ್ತಿರುವುದು ಮಾತ್ರವಲ್ಲದೆ, ಪ್ರಬುದ್ಧ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ಸ್ಥಾನಮಾನವನ್ನು ಸಹ ರಾಜಿ ಮಾಡಿಕೊಳ್ಳುತ್ತಿದೆ’ ಎಂದು ಇಂಡಿಯಾ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!