ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಗ್ರಾಹಕರಿಗೆ ಒಂದು ಬಂಪರ್ ಸುದ್ದಿ! ಇನ್ಮುಂದೆ ಅಡುಗೆ ಅನಿಲ ಮುಗಿದರೆ ದಿನಗಟ್ಟಲೆ ಕಾಯಬೇಕಾಗಿಲ್ಲ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಈ ವಿನೂತನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
ಜುಲೈ 15ರಿಂದ ಪ್ರಾಯೋಗಿಕವಾಗಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ HPCLನ ಹೊಸ ತಂತ್ರಜ್ಞಾನದ 10 ಕೆ.ಜಿ. ‘HP Navya’ ಕಾಂಪೋಸಿಟ್ ಸಿಲಿಂಡರ್ ಹಾಗೂ 5 ಕೆ.ಜಿ.ಯ ಸಣ್ಣ ಮೆಟಲ್ ಸಿಲಿಂಡರ್ ಆರ್ಡರ್ ಮಾಡಲು ಲಭ್ಯವಿರಲಿವೆ.
ಹೊಸ ಕನೆಕ್ಷನ್ ಬೇಡ, ಎಲ್ಲರಿಗೂ ಸುಲಭ!
ಈ ಯೋಜನೆಯ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಗ್ರಾಹಕರು ಈ ಸಿಲಿಂಡರ್ ಖರೀದಿಸಲು ಯಾವುದೇ ಮುಂಚಿತ ಗೃಹಬಳಕೆ ಎಲ್‌ಪಿಜಿ ಸಂಪರ್ಕ ಹೊಂದಿರಬೇಕಾದ ಅಗತ್ಯವಿಲ್ಲ. ಹೀಗಾಗಿ, ಇದು ನಗರದ ವಿದ್ಯಾರ್ಥಿಗಳು, ಬ್ಯಾಚುಲರ್ಸ್, ಐಟಿ ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ವರದಾನವಾಗಲಿದೆ. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಖಾಲಿ ಸಿಲಿಂಡರ್ ಇದ್ದರೆ, ರಿಫಿಲ್ ಪಡೆಯುವಾಗ ಅದನ್ನು ಡೆಲಿವರಿ ಬಾಯ್‌ಗೆ ಹಿಂತಿರುಗಿಸಬಹುದು.
ಸುರಕ್ಷಿತ ಹಾಗೂ ವಿಶ್ವಾಸಾರ್ಹ ವಿತರಣೆ
ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ ಪ್ರಕಾರ, ಇದು ಕೇವಲ ದಿನಸಿಗಷ್ಟೇ ಸೀಮಿತವಾಗದೆ ಗ್ರಾಹಕರ ದೈನಂದಿನ ಅಗತ್ಯಗಳನ್ನು ಪೂರೈಸುವ ಪ್ರಯತ್ನವಾಗಿದೆ. ಸುರಕ್ಷತೆಯ ದೃಷ್ಟಿಯಿಂದ, ಎಲ್ಲಾ ಸಿಲಿಂಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲದ ಮೂಲಕವೇ ವಿತರಿಸಲಾಗುತ್ತದೆ. ಅಂದಹಾಗೆ, ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ಡೆಲಿವರಿ ಪಡೆಯುವ ಮುನ್ನ ಕಡ್ಡಾಯವಾಗಿ ಗುರುತಿನ ಚೀಟಿ ಪರಿಶೀಲನೆ ಪೂರ್ಣಗೊಳಿಸಬೇಕಾಗುತ್ತದೆ.



