ʼಯಾವ ರಾಷ್ಟ್ರವೂ ಅಡ್ಡಿಯಾಗಬಾರದುʼ: ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸಲು ತಡೆಯೊಡ್ಡಿದ ಚೀನಾ ವಿರುದ್ಧ ಗುಟುರು ಹಾಕಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಂಬೈನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, “ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವ ನಿರ್ಣಯವನ್ನು ಎಲ್ಲಾ ಸಂಬಂಧಿತ ಪಕ್ಷಗಳು ಬೆಂಬಲಿಸಬೇಕು ಮತ್ತು ಯಾವುದೇ ರಾಷ್ಟ್ರವು ಅಡ್ಡಗಾಲು ಹಾಕಬಾರದು” ಎಂದು ಹೇಳಿದ್ದಾರೆ. ಆ ಮೂಲಕ ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಂತಿರುವ ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ 1267 ಪಟ್ಟಿಯ ಅಡಿಯಲ್ಲಿ ಭಯೋತ್ಪಾದಕರನ್ನು ನೇಮಿಸುವ ನಿರ್ಣಯಗಳನ್ನು ಸದಸ್ಯ ರಾಷ್ಟ್ರಗಳು ಬೆಂಬಲಿಸಬೇಕು ಎಂದು ಬ್ಲಿಂಕನ್ ಒತ್ತಾಯಿಸಿದ್ದಾರೆ. 1267 ಪಟ್ಟಿಯನ್ನು UNSC ಅಡಿಯಲ್ಲಿ 1999 ರಲ್ಲಿ ರಚಿಸಲಾದ ಸಮಿತಿಯು ನಿರ್ವಹಿಸುತ್ತದೆ.

ಅಲ್ ಖೈದಾ ಅಥವಾ ISIS ನೊಂದಿಗೆ ಸಂಯೋಜಿತವಾಗಿರುವ ಯಾವುದೇ ಗುಂಪಿನ ಹೆಸರನ್ನು ಭಯೋತ್ಪಾದಕ ಗುಂಪು ಎಂದು ಪಟ್ಟಿಗೆ ಸೇರಿಸಲು UN ಸದಸ್ಯ ರಾಷ್ಟ್ರಗಳಿಗೆ ಸಮಿತಿಯು ಅವಕಾಶ ನೀಡುತ್ತದೆ.

ಪಾಕಿಸ್ತಾನ ಮೂಲದ ಉಗ್ರಗಾಮಿ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಮಗ ಹಫೀಜ್ ತಲಾಹ್ ಸಯೀದ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತ ಮತ್ತು ಯುಎಸ್ ಪ್ರಸ್ತಾವನೆಯನ್ನು ತಡೆದ ಚೀನಾದ ವಿರುದ್ಧವಾಗಿ ಬ್ಲಿಂಕೆನ ಹೇಳಿಕೆ ಬಂದಿದೆ ಎಂದು ಮೂಲಗಳು ವರದಿಯಲ್ಲಿ ಉಲ್ಲೇಖಿಸಿವೆ.

ಮುಂಬೈ ದಾಳಿಯ ಭೀಕರತೆಯನ್ನು ನೆನಪಿಸಿಕೊಂಡ ಆಂಟೋನಿ ಬ್ಲಿಂಕೆನ್, “ನವೆಂಬರ್ 2008 ರಲ್ಲಿ ಮುಂಬೈ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಆರು ಯುಎಸ್ ನಾಗರಿಕರು ಸೇರಿದ್ದಾರೆ. ಆ ದಿನ ತನ್ನ ಜನರನ್ನು ಕಳೆದುಕೊಂಡ ಭಾರತ ಮತ್ತು ಎಲ್ಲಾ ರಾಷ್ಟ್ರಗಳೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಆದರೆ ನಾವು ಶೋಕಕ್ಕಿಂತ ಹೆಚ್ಚಿನದನ್ನು ಮಾಡಬೇಕು. ಮುಂಬೈ ದಾಳಿಯ ದುಷ್ಕರ್ಮಿಗಳು ಮತ್ತು ಅವರ ಮಾಸ್ಟರ್‌ಮೈಂಡ್‌ಗಳಿಗೆ ಶಿಕ್ಷೆಯಾಗುವಂತೆ ಹಾಗೂ ಸಂತ್ರಸ್ತರಿಗೆ ನ್ಯಾಯ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ”ಎಂದು ಬ್ಲಿಂಕನ್ ಉಲ್ಲೇಖಿಸಿದ್ದಾರೆ.

“ಇದಕ್ಕಾಗಿಯೇ ಯುನೈಟೆಡ್ ಸ್ಟೇಟ್ಸ್ ಭಾರತ ಮತ್ತು ಇತರ ಪಾಲುದಾರರೊಂದಿಗೆ 14 ವರ್ಷಗಳ ಕಾಲ ಕೆಲಸ ಮಾಡುತ್ತಿದೆ. ಈ ದಾಳಿಯ ಕಾರಣೀಭೂತರಾದವರಿಗೆ ಶಿಕ್ಷೆಯಾಗದಂತೆ ನಾವು ಅನುಮತಿಸಿದರೆ, ಭಯೋತ್ಪಾದಕರಿಗೆ ಅವರ ಹೇಯ ಕೃತ್ಯಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಹಾಗಾಗಬಾರದು, ಎಲ್ಲ ರಾಷ್ಟ್ರಗಳೂ ಅವರಿಗೆ ಶಿಕ್ಷೆಯಾಗುವುದನ್ನು ಬೆಂಬಲಿಸಬೇಕು” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!