ವಿಶ್ವಕಪ್‌ ನಲ್ಲಿ ಪಾಕ್‌ ಭವಿಷ್ಯ ನಿರ್ಧರಿಸಲಿದೆ ಭಾರತ..! ಹೀಗಿದೆ ಸೆಮೀಸ್‌ ಲೆಕ್ಕಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಬಾರಿಯ ಟಿ20 ವಿಶ್ವಕಪ್​ ಆರಂಭದಿಂದಲೇ ಹಲವಾರು ಅಚ್ಚರಿ ಸೃಷ್ಟಿಸುತ್ತಿದೆ. ಗೆಲ್ಲುವ ನೆಚ್ಚಿನ ತಂಡಗಳು ಹೀನಾಯವಾಗಿ ಸೋತು ಹೋಗುತ್ತಿವೆ. ʼಡಾರ್ಕ್‌ ಹಾರ್ಸ್‌ʼ ಆಗಿ ಮುಖ್ಯ ಸುತ್ತಿನಲ್ಲಿ ಕಣಕ್ಕಿಳಿದ ಕ್ರಿಕೆಟ್‌ ಶಿಶುಗಳು ನೆಚ್ಚಿನ ತಂಡಗಳಿಗೆ ಸೋಲಿನ ಶಾಕ್‌ ನೀಡಿ ಕಮಾಲ್‌ ಮಾಡುತ್ತಿವೆ. ಮತ್ತೊಂದೆಡೆ ಮಳೆ ಸಹ ಸಾಕಷ್ಟು ಕಾಟ ನೀಡುತ್ತಿದೆ. ಆದ್ದರಿಂದ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಭಾರತ ತಂಡವನ್ನು ಹೊರತುಪಡಿಸಿದರೆ ಮತ್ಯಾವುದೇ ತಂಡಕ್ಕೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಅದರಲ್ಲೂ, ಆಡಿದ ಎರಡೂ ಪಂದ್ಯಗಳಲ್ಲೂ ಸೋತಿರುವ ಪಾಕಿಸ್ತಾನ ಸ್ಥಿತಿ ಮತ್ತಷ್ಟು ಹೀನಾಯವಾಗಿದೆ.
ಭಾರತದ ಎದುರು ಸೋತು ನಿರಾಸೆಯ ಮಡುವಿನಲ್ಲಿ ಬಿದ್ದಿದ್ದ ಪಾಕ್‌ ಗೆ ಜಿಂಬಾಬ್ವೆ ಎದುರಿನ ರೋಚಕ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸೋಲಿನಿಂದ ಬಾಬರ್‌ ಸೇನೆ ಮನೆಗೆ ಹೋಗುವುದು ಬಹುತೇಕ ಪಕ್ಕಾ ಎಂಬಂತಾಗಿದೆ. ಅದಾಗ್ಯೂ ಪಾಕ್ ತಂಡಕ್ಕೆ ಈಗಲೂ ಸಹ ಸೇಮಿಸ್​ಗೇರುವ ಕ್ಷೀಣ ಅವಕಾಶವೂ ಇದೆ. ಆದರೆ ಪಾಕಿಗಳ ಸೆಮೀಸ್ ಆಸೆ ಕೈಗೂಡುವುದು ಭಾರತದ ಮುಂದಿನ ಫಲಿತಾಂಶಗಳ ಮೇಲೆ ಆಧಾರಿತವಾಗಿದೆ!.

ಹೀಗಿದೆ ಲೆಕ್ಕಾಚಾರ!
ಪಾಕಿಸ್ತಾನಕ್ಕೆ ವಿಶ್ವಕಪ್‌ ನಲ್ಲಿ ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ. ಪಾಕ್ ತಂಡದ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ನೆದರ್ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಲಿದೆ. ಪಾಕ್‌ ಮುಂದಿನ ಹಂತ ತಲುಪಬೇಕಾದರೆ ಈ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಲೇ ಬೇಕು. ಜೊತೆಗೆ ಭಾರೀ ಅಂತರದಲ್ಲಿ ಗೆದ್ದು ನೆಟ್ ರನ್ ​ರೇಟ್ ಹಿಡಿತದಲ್ಲಿಟ್ಟುಕೊಳ್ಳಬೇಕು. ಹೀಗಾದಲ್ಲಿ ತಂಡದ ಖಾತೆಗೆ  6 ಅಂಕಗಳು ಜಮಾವಣೆಯಾಗಲಿವೆ. ಜೊತೆಗೆ ಇತರೆ ತಂಡಗಳ ಫಲಿತಾಂಶಗಳೂ ಅದಕ್ಕೆ ಪೂರಕವಾಗಿ ಬರಬೇಕು.
ಟೀಂ ಇಂಡಿಯಾ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ  ತಂಡಗಳು ರೋಹಿತ್‌ ಪಡೆಗೆ ಮುಂದಿನ ಎದುರಾಳಿಗಳಾಗಿರಲಿವೆ. ಇದರಲ್ಲಿ ಒಂದು ಅಥವಾ ಎರಡು ಪಂದ್ಯಗಳನ್ನು ಗೆದ್ದರೂ ರನ್‌ ರೇಟ್‌ (+1.425) ಆಧಾರದ ಮೇಲೆ ಭಾರತಕ್ಕೆ ಸೆಮೀಸ್‌ ಟಿಕೆಟ್‌ ಪಕ್ಕ ಆಗಲಿದೆ. ಆದರೆ ಒಂದರಲ್ಲಿ ಗೆದ್ದು, ಒಂದು ಪಂದ್ಯವನ್ನು ಪಲಿತಾಂಶವಿಲ್ಲದೆ ಕೊನೆಗೊಳಿಸಿರುವ ಸೌತ್ ಆಫ್ರಿಕಾ (3 ಅಂಕ) ಕನಿಷ್ಠ ಮುಂದಿನ 2 ಪಂದ್ಯಗಳಲ್ಲಿ ಸೋಲಬೇಕು. ಅದರಲ್ಲೂ ಬಲಿಷ್ಠ ತಂಡ ಟೀಂ ಇಂಡಿಯಾದ ಎದುರು ನಾಳಿನ ಪಂದ್ಯದಲ್ಲಿ ಹಿನಾಯವಾಗಿ ಸೋತರೆ ಪಾಕಿಗಳ ಕನಸಿಗೆ ಬಲ ಸಿಗಲಿದೆ. ನಂತರ ಉಳಿಯುವ ಎರಡು ಪಂದ್ಯಗಳಲ್ಲಿ ಒಂದನ್ನು ಹರಿಣಗಳು ಪಾಕ್‌ ತಂಡದೆದುರೇ ಆಡಲಿದ್ದಾರೆ. ಆ ಪಂದ್ಯವನ್ನು ಬಾಬರ್‌ ಪಡೆ ಗೆದ್ದರೆ ಸೆಮಿಸ್‌ ಬಾಗಿಲು ತೆರೆದುಕೊಳ್ಳಲಿದೆ. ಆಗ ಒಟ್ಟಾರೆಯಾಗಿ ಆಫ್ರಿಕಾ ಖಾತೆಗೆ 5 ಅಂಕಗಳು ಮಾತ್ರ ಸಿಗಲಿವೆ. ಈ ವೇಳೆ ಪಾಕಿಸ್ತಾನ ಉಳಿದ 3 ಪಂದ್ಯಗಳನ್ನು ಗೆದ್ದರೆ 6 ಅಂಕಗಳನ್ನು ಸಂಪಾದಿಸುತ್ತದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಪಡೆಯುವ ಪಾಕಿಸ್ತಾನ ಸೇಮಿಸ್​ ಹಂತವನ್ನು ಪ್ರವೇಶಿಸಬಹುದಾಗಿದೆ. ಜೊತೆಗೆ ಭಾರತ ತಂಡವು ತನ್ನ ಇನ್ನುಳಿದ ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಂಬ್ವೆ ತಂಡಗಳನ್ನು ಸೋಲಿಸುವುದು ಪಾಕ್‌ ತಂಡದ ಪಾಲಿಗೆ ನಿರ್ಣಾಯಕವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!