November 23, 2026
Monday, November 23, 2026
spot_img

ಇಂದು ಮೋದಿ-ನೇಪಾಳ ಪ್ರಧಾನಿ ಬಾಲೇಂದ್ರ ಶಾ ಭೇಟಿ: ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ಮತ್ತು ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ವಾರಕ್ಕೊಮ್ಮೆ ಸಂಚರಿಸುವ ‘ಸರಯೂ-ಕಮಲಾ ಎಕ್ಸ್‌ಪ್ರೆಸ್’ ರೈಲಿಗೆ ಉಭಯ ನಾಯಕರು ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ.

ಮಾರ್ಚ್ 27ರಂದು ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರು ಕೈಗೊಂಡಿರುವ ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸ ಇದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಚೀನಾಕ್ಕೆ ಮೊದಲ ಭೇಟಿ ನೀಡುವ ಮೂಲಕ ಸಂಪ್ರದಾಯ ಮುರಿದಿದ್ದರು, ಆದರೆ ಶಾ ಅವರು ಭಾರತಕ್ಕೆ ಮೊದಲ ಭೇಟಿ ನೀಡುವ ಹಳೆಯ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ಇಂದಿನ ಕಾರ್ಯಕ್ರಮಗಳೇನು?

ಪ್ರಧಾನಿ ಬಾಲೇಂದ್ರ ಶಾ ಅವರಿಗೆ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಲಾಗುವುದು. ಬಳಿಕ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ 30 ನಿಮಿಷಗಳ ಕಾಲ ಮಾತುಕತೆ ನಡೆಸಲಿದ್ದು, ಬಳಿಕ ನಿಯೋಗ ಮಟ್ಟದ ಸಭೆ ಮತ್ತು ಮಹತ್ವದ ಒಪ್ಪಂದಗಳ ವಿನಿಮಯ ನಡೆಯಲಿದೆ. ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಬಳಿಕ ಶಾ ನೇಪಾಳಕ್ಕೆ ಹಿಂತಿರುಗಲಿದ್ದಾರೆ.

ಇದನ್ನೂ ಓದಿ:

ಚರ್ಚೆಯ ಪ್ರಮುಖ ವಿಷಯಗಳು

ಭೈರಹವಾ ಮತ್ತು ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಅಂತಾರಾಷ್ಟ್ರೀಯ ಸಂಪರ್ಕ ಸುಧಾರಿಸಲು ಭಾರತದ ವಾಯುಪ್ರದೇಶದ ಮೂಲಕ ಹೆಚ್ಚುವರಿ ಪ್ರವೇಶ ಮಾರ್ಗಗಳನ್ನು ನೀಡುವಂತೆ ನೇಪಾಳ ಬಹುದಿನಗಳಿಂದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಚರ್ಚೆಯಾಗಲಿದೆ.

ಆಗಸ್ಟ್ 26ರಂದು ಭೋಟೆಕೋಶಿ-ರಸುವಾ ಕಾರಿಡಾರ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಪುನರ್‌ನಿರ್ಮಾಣಕ್ಕಾಗಿ ನೇಪಾಳವು ಭಾರತದಿಂದ ಸುಮಾರು 2 ಬಿಲಿಯನ್ ಡಾಲರ್ ಅನುದಾನ ಮತ್ತು ರಿಯಾಯಿತಿ ಸಾಲದ ನೆರವನ್ನು ನಿರೀಕ್ಷಿಸುತ್ತಿದೆ. ಇನ್ನು, ಭಾರತಕ್ಕೆ ವಿದ್ಯುತ್ ರಫ್ತು ಹೆಚ್ಚಿಸಲು ನೇಪಾಳ ಉತ್ಸುಕವಾಗಿದ್ದು, ನೇಪಾಳದ ಜಲವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತ ಕೂಡ ಆಸಕ್ತಿ ತೋರಿದೆ.

ಶಾ ಅವರೊಂದಿಗೆ ವಿದೇಶಾಂಗ, ಹಣಕಾಸು, ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಇಂಧನ ಖಾತೆಗಳನ್ನು ಒಳಗೊಂಡಂತೆ ಕನಿಷ್ಠ ನಾಲ್ವರು ಸಚಿವರು ಹಾಗೂ ಉದ್ಯಮಿಗಳ ನಿಯೋಗವು ಭಾರತಕ್ಕೆ ಆಗಮಿಸಿದೆ.

Must Read

Skip to toolbar