November 23, 2026
Monday, November 23, 2026
spot_img

ಶತಕ ಬಾರಿಸಿದರೂ ಸೋಲಿನ ಕಹಿಯುಂಡ ತಿಲಕ್: ನಿಧಾನಗತಿಯ ಆಟಕ್ಕೆ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ACC ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ್ ‘ಎ’ ತಂಡವು ಭಾರತ ‘ಎ’ ವಿರುದ್ಧ 48 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ‘ಎ’ 313 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ‘ಎ’ ತಂಡ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು.

ನೇಪಾಳ ವಿರುದ್ಧದ ಹಿಂದಿನ ಪಂದ್ಯದಲ್ಲಿ 107 ರನ್ ಗಳಿಸಿದ್ದ ನಾಯಕ ತಿಲಕ್ ವರ್ಮಾ, ಪಾಕಿಸ್ತಾನ್ ವಿರುದ್ಧವೂ ಸತತ ಎರಡನೇ ಶತಕ (149 ಎಸೆತಗಳಲ್ಲಿ 100 ರನ್, 67.11 ಸ್ಟ್ರೈಕ್ ರೇಟ್) ಸಿಡಿಸಿದರು. ಆದರೆ ಅವರ ಈ ನಿಧಾನಗತಿಯ ಇನ್ನಿಂಗ್ಸ್ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಎಸೆತಗಳನ್ನು ತೆಗೆದುಕೊಂಡಿದ್ದರಿಂದ ಅಗತ್ಯ ರನ್‌ರೇಟ್ ಏರುತ್ತಾ ಸಾಗಿತು.

ಮತ್ತೊಂದೆಡೆ ಶಹಬಾಝ್ ಅಹ್ಮದ್ ಕೇವಲ 49 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 56 ರನ್ ಗಳಿಸಿ ವೇಗವಾಗಿ ರನ್ ಸೇರಿಸಿದರು. ತಿಲಕ್ ಕ್ರೀಸ್‌ನಲ್ಲಿ ನಿಧಾನವಾಗಿ ಆಡುತ್ತಿದ್ದರಿಂದ ಶಹಬಾಝ್ ಮೇಲೆ ರನ್ ವೇಗ ಹೆಚ್ಚಿಸುವ ಒತ್ತಡ ಬಿದ್ದಿತು ಎಂಬ ಮಾತುಗಳು ಕೇಳಿಬರುತ್ತಿವೆ. ದೊಡ್ಡ ಹೊಡೆತಕ್ಕೆ ಮುಂದಾದ ಶಹಬಾಝ್ ಔಟಾದ ಬಳಿಕ ಭಾರತದ ಗೆಲುವಿನ ಆಸೆ ಕಮರಿತು.

ಸೋಲಿನ ಬಳಿಕ ಮಾತನಾಡಿದ ತಿಲಕ್ ವರ್ಮಾ, “ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ನಾನು ಮತ್ತು ಶಹಬಾಝ್ ನಿರ್ಮಿಸಿದ ಜೊತೆಯಾಟ ಮಹತ್ವದ್ದಾಗಿತ್ತು. ರನ್ ವೇಗ ಹೆಚ್ಚಿಸುವ ವೇಳೆ ಶಹಬಾಝ್ ಔಟಾದರು. ಅವರು ಇನ್ನೆರಡು ಓವರ್ ಇದ್ದಿದ್ದರೆ ಪಂದ್ಯ ಗೆಲ್ಲಿಸಬಹುದಿತ್ತು” ಎಂದರು. ಆರಂಭಿಕ 10 ಓವರ್‌ಗಳಲ್ಲಿ ಚೆಂಡು ಸ್ವಿಂಗ್ ಆಗುತ್ತಿದ್ದ ಕಾರಣ ಪಾಕ್ ವೇಗಿಗಳು ಉತ್ತಮವಾಗಿ ಬೌಲ್ ಮಾಡಿದರು ಎಂದು ತಿಳಿಸಿದರು. ಮಧ್ಯದಲ್ಲಿ ಸತತ ವಿಕೆಟ್ ಕಳೆದುಕೊಂಡಿದ್ದೇ ಹಿನ್ನಡೆಯಾಯಿತು ಎಂದ ಅವರು, “ತಂಡ ಗೆಲ್ಲದಿದ್ದರೆ ನನ್ನ ಶತಕವೂ ಶ್ರೇಷ್ಠವಲ್ಲ. ನಾಯಕನಾಗಿ ಕೊನೆಯವರೆಗೂ ಹೋರಾಡಿದ್ದೇನೆ. ಇನ್ನೊಬ್ಬ ಬ್ಯಾಟರ್ ಸಾಥ್ ಕೊಟ್ಟಿದ್ದರೆ ಖಂಡಿತ ಗೆಲ್ಲುತ್ತಿದ್ದೆವು” ಎಂದು ಹೇಳಿದರು.

Must Read

Skip to toolbar