November 23, 2026
Monday, November 23, 2026
spot_img

‘ಪುಷ್ಪ 2’, ‘ಧುರಂಧರ್ 2’ ದಾಖಲೆ ಉಡೀಸ್: 2000 ಕೋಟಿ ಕ್ಲಬ್‌ನತ್ತ ‘ರಾಮಾಯಣ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಸಮೀಪಿಸುತ್ತಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಅಬ್ಬರ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ವಾರದ ದಿನಗಳಲ್ಲಿ ತುಸು ನಿಧಾನವಾಗಿದ್ದ ಗಳಿಕೆಯ ವೇಗ, ವೀಕೆಂಡ್ ಬರುತ್ತಿದ್ದಂತೆ ಮತ್ತೆ ರಾಕೆಟ್ ವೇಗ ಪಡೆದುಕೊಂಡಿದೆ. ಈ ಮೂಲಕ ಬರೋಬ್ಬರಿ 2000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಕನಸನ್ನು ಸಿನಿಮಾ ಜೀವಂತವಾಗಿರಿಸಿಕೊಂಡಿದೆ.

ಸಿನಿಮಾ ತೆರೆಕಂಡು 18 ದಿನಗಳು ಪೂರೈಸಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ ಬರೋಬ್ಬರಿ 35.60 ಕೋಟಿ ರೂಪಾಯಿ ಗಳಿಸುವ ಮೂಲಕ ‘ರಾಮಾಯಣ’ ಅಚ್ಚರಿ ಮೂಡಿಸಿದೆ. ಬಿಡುಗಡೆಯಾದ 18ನೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುವುದು ಸಾಮಾನ್ಯ ಮಾತಲ್ಲ. ಈ ಭರ್ಜರಿ ಕಲೆಕ್ಷನ್ ಮೂಲಕ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಹಾಗೂ ‘ಧುರಂಧರ್ 2’ ಸಿನಿಮಾಗಳ 18ನೇ ದಿನದ ದಾಖಲೆಯನ್ನು ‘ರಾಮಾಯಣ’ ಸಲೀಸಾಗಿ ಮುರಿದು ಮುನ್ನುಗ್ಗಿದೆ.

ಶನಿವಾರ ಮತ್ತು ಭಾನುವಾರ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ 27.65 ಕೋಟಿ ರೂಪಾಯಿ ಕಲೆಹಾಕಿದ್ದ ಚಿತ್ರ, ಭಾನುವಾರ 35.60 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೇವಲ ಎರಡೇ ದಿನಗಳಲ್ಲಿ 63 ಕೋಟಿಗೂ ಅಧಿಕ ಮೊತ್ತವನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈವರೆಗೆ ವಿಶ್ವಾದ್ಯಂತ ಸಿನಿಮಾದ ಒಟ್ಟು ಗಳಿಕೆ 1690 ಕೋಟಿ ರೂಪಾಯಿಗೆ ತಲುಪಿದ್ದು, ಭಾರತದಲ್ಲೇ ಬರೋಬ್ಬರಿ 942 ಕೋಟಿ ರೂಪಾಯಿ ಗಳಿಸಿ ಸಾವಿರ ಕೋಟಿಯ ಸನಿಹಕ್ಕೆ ಬಂದು ನಿಂತಿದೆ.

18ನೇ ದಿನ ದೇಶಾದ್ಯಂತ ಒಟ್ಟು 16,277 ಪ್ರದರ್ಶನಗಳನ್ನು ಕಂಡಿರುವ ಈ ಚಿತ್ರ, ಪ್ರತಿ ಶೋಗೆ ಸರಾಸರಿ 21,881 ರೂಪಾಯಿ ಗಳಿಸಿದೆ. ಎಂದಿನಂತೆ ಹಿಂದಿ ಆವೃತ್ತಿಯೇ ಸಿಂಹಪಾಲು ಪಡೆದಿದ್ದು, 13,852 ಶೋಗಳಿಂದ 26.25 ಕೋಟಿ ರೂ. ಗಳಿಸಿದೆ. ಇನ್ನುಳಿದಂತೆ ಮಲಯಾಳಂನಲ್ಲಿ 873 ಶೋಗಳಿಂದ 3.40 ಕೋಟಿ ರೂ., ಕನ್ನಡದಲ್ಲಿ 449 ಶೋಗಳಿಂದ 2.50 ಕೋಟಿ ರೂ., ತಮಿಳಿನಲ್ಲಿ 645 ಶೋಗಳಿಂದ 2.40 ಕೋಟಿ ರೂ. ಹಾಗೂ ತೆಲುಗಿನಲ್ಲಿ 458 ಶೋಗಳಿಂದ 1.05 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ಟಿಕೆಟ್ ದರವನ್ನು ಕಡಿಮೆ ಮಾಡಿರುವುದು ಪ್ರೇಕ್ಷಕರಿಗೆ ವರದಾನವಾಗಿದೆ. ಕಡಿಮೆ ದರದಲ್ಲಿ ಕುಟುಂಬ ಸಮೇತ ಸಿನಿಮಾ ನೋಡಲು ಜನರು ಮುಗಿಬೀಳುತ್ತಿರುವುದೇ ಈ ದಾಖಲೆಯ ಗಳಿಕೆಗೆ ಪ್ರಮುಖ ಕಾರಣವಾಗಿದೆ.

Must Read

Skip to toolbar