ಎಷ್ಟು ಕಂತೆ ಎಣಿಸಿದರೂ ಮುಗಿಯುತ್ತಿಲ್ಲ…ಕಾಂಗ್ರೆಸ್ ನಾಯಕನ ಮನೆಯಲ್ಲಿ ಸಿಕ್ಕಿತು 290 ಕೋಟಿ ರೂಪಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾ ಮೂಲದ ಬೌಧ್​ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 290 ಕೋಟಿ ರೂಪಾಯಿ ಪತ್ತೆಯಾಗಿದೆ.

ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸಂಬಂಧಿಸಿರುವ ಆಸ್ತಿಗಳ ಮೇಲೆ ಎರಡು ದಿನಗಳ ಕಾಲ ಅನೇಕ ಸ್ಥಳಗಳಲ್ಲಿ ಐಟಿ ದಾಳಿ ಮುಂದುವರೆದಿದೆ.

ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸುಮಾರು 290 ಕೋಟಿ ರೂಗಳಷ್ಟು ನಗದನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ನಗದನ್ನು ಎಣಿಕೆ ಮಾಡಬೇಕಾಗಿರುವುದರಿಂದ ಮತ್ತು ಹೆಚ್ಚಿನ ಸ್ಥಳಗಳಲ್ಲಿ ನಗದು ಬಚ್ಚಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ದೊರೆತಿರುವುದರಿಂದ ಮೊತ್ತ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಬ್ಯಾಂಕ್​ ಸಿಬ್ಬಂದಿ ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿ ನೋಟು ಎಣಿಸಲು ನಿಯೋಜಿಸಲಾಗಿದ್ದು, ಡಿ.6ರಂದು ಆರಂಭವಾದ ನೋಟು ಎಣಿಕೆ ಮೂರು ದಿನವಾದರೂ ಮುಂದುವರಿದಿದೆ.

ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರು ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾಗಿದೆ.

ಇಲ್ಲಿಯವರೆಗೆ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಸ್ತುತ, ತೆರಿಗೆ ಅಧಿಕಾರಿಗಳು ವಿವಿಧ ಕಂಪನಿ ಅಧಿಕಾರಿಗಳು ಮತ್ತು ಭಾಗಿಯಾಗಿರುವ ಇತರ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ನಗದು ಎಣಿಕೆಯು ಶನಿವಾರದ ಅಂತ್ಯದ ವೇಳೆಗೆ ಮುಗಿಯುವ ನಿರೀಕ್ಷೆಯಿದೆ.

ಧೀರಜ್ ಸಾಹು ಯಾರು?
ಜಾರ್ಖಂಡ್​ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು ಕಾಂಗ್ರೆಸ್​ನ ಹಿರಿಯ ನಾಯಕ. 1977ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಧೀರಜ್ ಮೂರನೇ ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಅವರು 2010-2016ರ ಅವಧಿಯಲ್ಲಿ ಕಾಂಗ್ರೆಸ್​ನ ರಾಜ್ಯಸಭಾ ಸಂಸದರಾಗಿದ್ದರು. 2018ರಲ್ಲಿ ಅವರು ಜಾರ್ಖಂಡ್​ನಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಗೆದ್ದರು. ಸಾಹು ಅವರು 2003-05ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!