ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಆರ್‌ಎಸ್‌ಎಸ್ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಬಸವರಾಜ ಬೊಮ್ಮಾಯಿ, ಆರ್ ಎಸ್ ಎಸ್ ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ, ಓಲೈಕೆ ರಾಜಕೀಯಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಸಂಘ-ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಟೀಕರಣಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಆರ್ ಎಸ್ ಎಸ್, ಬಜರಂಗದಳ ನಿಷೇಧ ಬಗ್ಗೆ ಸಿಎಂ ನಿಲುವು ಸ್ಪಷ್ಪಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನರಿಗೆ ತಿಳಿಸಲಿ. ಆರ್‌ಎಸ್‌ಎಸ್ ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಒಂದೇ ಪಕ್ಷದ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಇಬ್ಬರು ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಮಾಡುತ್ತಿಲ್ಲ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ತನಿಖೆ ಮಾಡಿ ಕೇಸ್ ಹಾಕಲಿ ನಾವು ಎದುರಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.