ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ದೇವಾಲಯಗಳ, ಗ್ರಾಮೀಣ ಭಾಗದ ಜನರ ಮತ್ತು ಇತರರ ಭೂಮಿಯನ್ನು ವಕ್ಫ್ ಮಂಡಳಿ ಕಬಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಾಗ್ದಾಳಿ ನಡೆಸಿದರು.
ಜಾರ್ಖಂಡ್‌ನ ಬಾಘ್ಮಾರಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕಾಲ ಕೂಡಿಬಂದಿದೆ ಎಂದು ಪ್ರತಿಪಾದಿಸಿದರು.
ವಕ್ಫ್ ಮಂಡಳಿಯು ಭೂಮಿಯನ್ನು ವಶಪಡಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ದೇವಸ್ಥಾನ, ರೈತರ, ಗ್ರಾಮಸ್ಥರ ಜಮೀನು ಕಬಳಿಸಿದೆ. ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಬೇಕೋ, ಬೇಡವೋ ಎಂದು ನೀವು ಹೇಳಿ. ಹೇಮಂತ್ ಬಾಬು (ಹೇಮಂತ್ ಸೊರೇನ್) ಮತ್ತು ರಾಹುಲ್ ಗಾಂಧಿ ಅವರು ತಿದ್ದುಪಡಿ ಬೇಡ ಎನ್ನುತ್ತಾರೆ. ಅವರು ಅದನ್ನು ವಿರೋಧಿಸುತ್ತಲೇ ಇರಲಿ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಬಿಜೆಪಿ ಅಂಗೀಕರಿಸುತ್ತದೆ. ನಮ್ಮನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.
ಜೆಎಂಎಂ ನೇತೃತ್ವದ ಮೈತ್ರಿಕೂಟವು ನುಸುಳುಕೋರರನ್ನು ತನ್ನ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ, ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.
ನುಸುಳುಕೋರರು ಜಾರ್ಖಂಡ್‌ಗೆ ಬರುವುದನ್ನು ತಡೆಯುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಗೊಳಿಸುವುದು ನಿಶ್ಚಿತ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಸ್ಥಳೀಯ ಬುಡಕಟ್ಟು ಜನರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲಾಗುವುದುಎಂಬುದನ್ನು ಪುನರುಚ್ಚರಿಸಿದರು.