ʼನಿಮ್ಮ ಅನುಮತಿ ಅಗತ್ಯ ಇಲ್ಲ’: LAC ಬಳಿ ಇಂಡೋ- ಅಮೆರಿಕ ಮಿಲಿಟರಿ ಅಭ್ಯಾಸಕ್ಕೆ ಆಕ್ಷೇಪಿಸಿದ್ದ ಚೀನಾಕ್ಕೆ ಭಾರತ ಪ್ರತ್ಯುತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರಾಖಂಡ್‌ ರಾಜ್ಯದ ಔಲಿ ಬಳಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಮಿಲಿಟರಿ ಅಭ್ಯಾಸದ 18 ನೇ ಆವೃತ್ತಿಗೆ ಆಕ್ಷೇಪಣೆ ಸಲ್ಲಿಸಿದ್ದ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ, ನಮ್ಮ ನಿರ್ಧಾರಗಳ ಬಗ್ಗೆ ಯಾವುದೇ ಮೂರನೇ ರಾಷ್ಟ್ರ ಮೂಗುತೂರಿಸುವ ಅಗತ್ಯ ಇಲ್ಲ ಎಂದು ಖಡಕ್‌ ಮಾತುಗಳಲ್ಲಿ ಸ್ಪಷ್ಟಪಡಿಸಿದೆ.
ಭಾರತವು ತನಗೆ ಸೂಕ್ತ ಎನಿಸುವ ಪಾಲುದಾರನೊಂದಿಗೆ ಮಿಲಿಟರಿ ಅಭ್ಯಾಸ ನಡೆಸುತ್ತದೆ. ಈ ವಿಷಯಕ್ಕಾಗಿ ನಾವು ಮೂರನೇ ರಾಷ್ಟ್ರದ ಅನುಮತಿ ಪಡೆಯಬೇಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಜೊತೆಗೆ ಈ ಅಭ್ಯಾಸವು ಭಾರತ ಮತ್ತು ಚೀನಾ ನಡುವಿನ ಯಾವುದೇ ದ್ವಿಪಕ್ಷೀಯ ಒಪ್ಪಂದವನ್ನೂ ಉಲ್ಲಂಘಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ʼನೈಜ ನಿಯಂತ್ರಣ ರೇಖೆಯಿಂದ (LAC) ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿ  ಭಾರತ ಮತ್ತು ಯುಎಸ್ ನಡುವಿನ ಜಂಟಿ ಮಿಲಿಟರಿ ಅಭ್ಯಾಸವು 1993 ಮತ್ತು 1996 ರಲ್ಲಿ ನವದೆಹಲಿ ಮತ್ತು ಬೀಜಿಂಗ್ ನಡುವೆ ಸಹಿ ಹಾಕಲಾದ ಎರಡು ಗಡಿ ಒಪ್ಪಂದಗಳ ಉತ್ಸಾಹವನ್ನು ಮಿಲಿಟರಿ ವ್ಯಾಯಾಮ ಉಲ್ಲಂಘಿಸುತ್ತದೆʼ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಬುಧವಾರ ಆಕ್ಷೇಪಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಗ್ಚಿ, ಔಲಿಯಲ್ಲಿ ಯುಎಸ್ ಜೊತೆಗಿನ ಜಂಟಿ ಸಮರಾಭ್ಯಾಸಕ್ಕೂ ಚೀನಾದೊಂದಿಗಿನ 1993 ಮತ್ತು 1996 ರ ಒಪ್ಪಂದಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. “1993 ಮತ್ತು 1996 ರ ಒಪ್ಪಂದಗಳು ತನ್ನಿಂದ ಎಷ್ಟರ ಮಟ್ಟಿಗೆ ಉಲ್ಲಂಘನೆ ಆಗುತ್ತಿದೆ ಎಂಬುದನ್ನು ಚೀನಾ ಯೋಚಿಸುವ ಅಗತ್ಯವಿದೆʼ ಎಂದು ಅವರು ಪ್ರತಿಪಾದಿಸಿದರು.

ಯುಎಸ್-ಇಂಡಿಯಾ ಮಿಲಿಟರಿ ಯುದ್ಧಾಭ್ಯಾಸ:
ಎರಡು ರಾಷ್ಟ್ರಗಳ ಸೇನೆಗಳ ನಡುವೆ ಉತ್ತಮ ಯುದ್ಧ ಅಭ್ಯಾಸಗಳು, ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಭಾರತ ಮತ್ತು ಅಮೆರಿಕ ನಡುವೆ ವಾರ್ಷಿಕವಾಗಿ ‘ಯುದ್ಧ ಅಭ್ಯಾಸ’ ಎಂಬ ಮಿಲಿಟರಿ ಅಭ್ಯಸವನ್ನು ನಡೆಸಲಾಗುತ್ತದೆ. ಇದು ಭಾರತ-ಯುಎಸ್ ಜಂಟಿ ವ್ಯಾಯಾಮದ 18 ನೇ ಆವೃತ್ತಿ.  ಹಿಂದಿನ ಆವೃತ್ತಿಯನ್ನು 2021 ರ ಅಕ್ಟೋಬರ್‌ನಲ್ಲಿ ಅಮೆರಿಕದ ಅಲಾಸ್ಕಾದ ಜಂಟಿ ಬೇಸ್ ಎಲ್ಮೆಂಡಾರ್ಫ್ ರಿಚರ್ಡ್‌ಸನ್‌ನಲ್ಲಿ ನಡೆಸಲಾಗಿತ್ತು. ಅಸ್ಸಾಂ ರೆಜಿಮೆಂಟ್  ಈ ಸಮರಾಭ್ಯಾಸದಲ್ಲಿ ಭಾಗವಹಿಸಿದೆ. ಜಂಟಿ ವ್ಯಾಯಾಮವು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!