ಮೈತ್ರಿ ಅಭ್ಯರ್ಥಿಯಾಗಿ ಅವಕಾಶ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಖಚಿತ-ಸುಮಲತಾ ಆಪ್ತ ಶಶಿಕುಮಾರ್ ಸ್ಪಷ್ಟನೆ

ಹೊಸದಿಗಂತ ವರದಿ ಮಂಡ್ಯ:

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸಂಸದೆ ಸುಮಲತಾ ಅವರಿಗೆ ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಅವಕಾಶ ಸಿಗುವ ವಿಶ್ವಾಸವಿದೆ, ಒಂದು ವೇಳೆ ಅವಕಾಶ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಸಂಸದೆ ಸುಮಲತಾ ಅವರ ಆಪ್ತ ಹನಕೆರೆ ಶಶಿಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ಬಿಜೆಪಿ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿ ಅವರ ಪರ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇವು, ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ, ಒಂದು ವೇಳೆ ಬಿ.ಫಾರಂ ಸಿಗದಿದ್ದರೂ ಅವರು ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕರೆ ಸುಮಲತಾ ಅವರು ಸ್ಪರ್ಧಿಸುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅವರು ಇದುವರೆಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ, ಕೇವಲ ಬಾಹ್ಯ ಬೆಂಬಲವನ್ನಷ್ಟೆ ನೀಡಿದ್ದಾರೆ. ಅಂತಹ ಬೆಳವಣಿಗೆ ನಡೆದರೆ ಕಾಂಗ್ರೆಸ್ ನಿಂದ ಸ್ಪರ್ಧಿಸುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಅವರು ಕಳೆದ ನಾಲ್ಕೂವರೆ ವರ್ಷಗಳಿಂದ ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಜನಪರ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಯನ್ನು ಕಾಲಕಾಲಕ್ಕೆ ನಡೆಸಿಕೊಂಡು ರಾಜ್ಯದ ಸಂಸದಲ್ಲಿಯೇ ಮೊದಲಿಗರಾಗಿರುವ ಹೆಗ್ಗಳಿಕೆ ಅವರದಾಗಿರುತ್ತದೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಸಂಸದರಲ್ಲಿ ಸುಮಲತಾ ಎರಡನೆಯವರಾಗಿದ್ದಾರೆ ಎಂದರು.
ಮೈಷುಗರ್ ಹಾಗೂ ಪಿ.ಎಸ್.ಎಸ್.ಕೆ ಪುನರಾರಂಭ ಮತ್ತು ಅಕ್ರಮ ಗಣಿಗಾರಿಕೆ ಸ್ಥಗಿತದಲ್ಲಿ ಸಂಸದರ ಒತ್ತಾಸೆ ಇದ್ದು, ಇದನ್ನು ಜಿಲ್ಲೆಯ ಮತದಾರರು ಅರ್ಥೈಸಿಕೊಂಡಿದ್ದಾರೆ. ಅಂಬರೀಶ್ ಅವರ ಜನಪರ ಕಾರ್ಯಗಳು ಸುಮಲತಾ ಅವರಿಗೆ ವರವಾಗಲಿವೆ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಬಿ.ಅರವಿಂದಕುಮಾರ್, ಹಾಗಲಹಳ್ಳಿ ಬಸವರಾಜು, ಮುಟ್ಟನಹಳ್ಳಿ ಮಹೇಂದ್ರ ಹಾಗೂ ಕೋಣಸಾಲೆ ಜಯರಾಮು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!