ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯದ ಎಂಟು ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಇಲ್ಲಿನ ಜನರು ಪ್ರಕೃತಿಯ ರಕ್ಷಕರು ಹಾಗೂ ರಾಯಭಾರಿಗಳು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಸಿಕ್ಕಿಂ ರಾಜ್ಯದ 50ನೇ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಅನೇಕ ಕಡೆ ಧರ್ಮ ಮತ್ತು ರಾಜಕೀಯದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಯತ್ನಗಳು ನಡೆಯುತ್ತಿರುವ ಸಮಯದಲ್ಲಿ ಸಿಕ್ಕಿಂ ರಾಜ್ಯವು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದೆ. ಈ ಮೂಲಕ ಎಲ್ಲೆಡೆ ಒಗ್ಗಟ್ಟಿನ ಸಂದೇಶವನ್ನು ಸಾರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು .
ಕೇಂದ್ರ ಸರಕಾರವು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಯ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಅದಕ್ಕಾಗಿ ‘ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್’ ಯೋಜನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಕೇಂದ್ರ ಸರಕಾರ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಇಲ್ಲಿನ ಜೈವಿಕ ಕೃಷಿ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಆರೋಗ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಲ್ಲಿನ ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷಿಸಿ ಮೂಲೆಗುಂಪು ಮಾಡಿತ್ತು, ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ರೈಲ್ವೆ ಸಂಪರ್ಕವು ಸಿಕ್ಕಿಂ ರಾಜ್ಯವನ್ನು ತಲುಪಲಿದೆ. ನಾಥುಲಾ ಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇಲ್ಲಿನ ಜನರಿಗೆ ಉದ್ಯೋಗಕ್ಕೆ ಸಹಕಾರಿಯಾಗುವಂತೆ ಸುಮಾರು 1,000 ಹೋಂಸ್ಟೇಗಳು ನಿರ್ಮಾಣವಾಗುತ್ತಿದ್ದು, ಇದರಿಂದ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಹಸ ಕ್ರೀಡೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ವಿಶೇಷವಾಗಿ ಫುಟ್‌ಬಾಲ್ ಮತ್ತು ಆರ್ಚರಿ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಸಿಕ್ಕಿಂ ರಾಜ್ಯದ ಸೌಂದರ್ಯವನ್ನು ವರ್ಣಿಸಿದ ಮೋದಿ, ಇಲ್ಲಿನ ಸೌಂದರ್ಯ ಮತ್ತು ಆಧ್ಯಾತ್ಮಿಕ ಆನಂದವನ್ನು ಪ್ರಕೃತಿ ಪ್ರೇಮಿಗಳು ಸವಿಯಬೇಕು. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿ ಎಂದು ಮನವಿ ಮಾಡಿದರು.



