ಅಂಬೇಡ್ಕರ್ ಅಷ್ಟೇ ಅಲ್ಲ ಅವರ ಪತ್ರಿಕೆಗಳು ಧ್ವನಿಯೆತ್ತಿದ್ದವು..!

– ನಿತೀಶ ಡಂಬಳ

ಡಾ. ಭೀಮರಾವ್ ಅಂಬೇಡ್ಕರ್ ಎಲ್ಲರ ಗೌರವದ ಬಾಬಾಸಾಹೇಬ್ ಹೆಸರು ಕೇಳಿದಾಕ್ಷಣ ಅನೇಕ ಸಂಗತಿಗಳು ಥಟ್ ಅಂತ ಮನಸ್ಸಿಗೆ ಬರುತ್ತವೆ. ಸಂವಿಧಾನ ಶಿಲ್ಪಿ, ಶೋಷಿತರ ಪರ ಧ್ವನಿ ಎತ್ತಿದವರು, ದಲಿತ ನಾಯಕ, ಚಿಂತಕ, ವಾಗ್ಮಿ ಇನ್ನೂ ಇತ್ಯಾದಿ. ಆದರೆ ಅಂಬೇಡ್ಕರ ಒಬ್ಬ ಬಹುಮುಖಿ ವ್ಯಕ್ತಿ. ಸಾರ್ವಜನಿಕ ಹಾಗೂ ರಾಜಕೀಯ ಜೀವನದ ಅನೇಕ ಸ್ಥಾನಮಾನಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಡಾ. ಬಾಬಾಸಾಹೇಬ ಈ ದೇಶ ಕಂಡ ಪ್ರಮುಖ ಪತ್ರಿಕೋದ್ಯೋಗಿಯೂ ಹೌದು…!

ಅದು ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯ ಪೂರ್ವ ಕಾಲ. ಸ್ವಾತಂತ್ರ್ಯ ಹೋರಾಟ ಶಿಖರಕ್ಕೇರಿದ ದಿನಗಳು. ಆಗಿನ ಕಾಲಕ್ಕೆ ಸ್ವಾತಂತ್ರ್ಯ ಜಾಗೃತಿಗೆ, ಸಂದೇಶ ರವಾನೆಗೆ ಮುಖ್ಯ ಮಾಧ್ಯಮವಾಗಿದ್ದು ಪತ್ರಿಕೆಗಳು. ನಿತ್ಯದ ವೃತ್ತಾಂತ ಹೊರತುಪಡಿಸಿ ಚಿಂತನೆಗೆ ಹಚ್ಚುವ, ಜಾಗೃತಿ ಮೂಡಿಸುವ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ತಿಲಕರ ’ಕೇಸರಿ’ ಹಾಗೂ ’ಮರಾಠಾ’, ಘೋಷ್ ಪರಿವಾರದ ’ಅಮೃತ ಬಜಾರ್ ಪತ್ರಿಕಾ’, ಗಾಂಧಿ ಅವರ ’ಸತ್ಯಾಗ್ರಹ’, ’ಯಂಗ್ ಇಂಡಿಯಾ’ ಇತ್ಯಾದಿಗಳು ಹೆಚ್ಚು ಜನಪ್ರಿಯವಾಗಿದ್ದವು.

ಡಾ. ಅಂಬೇಡ್ಕರ್ರು ಕೂಡ ತಮ್ಮ ಜೀವಮಾನದಲ್ಲಿ ಪತ್ರಿಕಾ ಸಂಪಾದಕರಾಗಿ ಹೊಣೆ ಹೊತ್ತು, ಲೋಕ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೂ ಅಸ್ಪೃಶ್ಯರಿಗಾದ ಅನ್ಯಾಯ, ಅವಮಾನ ನೋಡಿ, ಸ್ವತಃ ಅನುಭವಿಸಿ ಬೆಳೆದ ಅಂಬೇಡ್ಕರ್ ದಲಿತರ ಸಮಸ್ಯೆ ಪರಿಹರಿಸಲು ವೇದಿಕೆಯಾಗಿ ಆರಂಭಿಸಿದ್ದು ಮರಾಠಿ ಭಾಷೆಯ ’ಮೂಕನಾಯಕ’ ಪತ್ರಿಕೆ.

ಜಾತಿ ಹಾಗೂ ಅಸ್ಪೃಶ್ಯತೆ ಇವೇ ಎರಡು ಮುಖ್ಯ ವಿಷಯಗಳಿಟ್ಟುಕೊಂಡು 1920 ಜನೆವರಿ 31ರಂದು ಬಾಂಬೆಯಲ್ಲಿ ಮೂಕನಾಯಕ ಪಾಕ್ಷಿಕ ಪತ್ರಿಕೆ ಆರಂಭವಾಯಿತು. ಪತ್ರಿಕೆಯ ಸಂಪೂರ್ಣ ನೇರ ಹೊಣೆಗಾರಿಕೆ ಹೊಂದಿಲ್ಲವಾದರೂ, ಅದರ ಏಳಿಗೆಗೆ ಅಂಬೇಡ್ಕರರು ತೆರೆ ಮರೆಯ ಶ್ರಮವಹಿಸಿದ್ದರು. ಆರು ತಿಂಗಳ ಅವಧಿಯಲ್ಲಿ ಮೂಕನಾಯಕ ಪತ್ರಿಕೆಯ 12 ಸಂಚಿಕೆಗಳಿಗೆ ಅಂಬೇಡ್ಕರ್ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

ಅಸ್ಪೃಶ್ಯರ ಸಂಘಟನೆ, ಅವರ ಸಮಸ್ಯೆ, ಪರಿಹಾರ, ಶಿಕ್ಷಣ ಜಾಗೃತಿ ಅವರ ಸಾಮಾಜಿಕ ಪ್ರಗತಿ, ಭಾರತೀಯ ಜಾತಿ ವ್ಯವಸ್ಥೆ, ರಾಜಕೀಯ ಪ್ರಜ್ಞೆ ಮುಂತಾದ ವಿಷಯಗಳು ಅಂಬೇಡ್ಕರ್ರ ಲೇಖನಗಳ ಮೂಲಕ ಮೂಕನಾಯಕದಲ್ಲಿ ಪ್ರಕಟಗೊಳ್ಳುತ್ತಿದ್ದವು. ಕೊಲ್ಹಾಪುರದ ಶಾಹು ಮಹಾರಾಜರು ಅಂಬೇಡ್ಕರರಿಗೆ ಮೂಕನಾಯಕ ಪತ್ರಿಕೆಗೆ ೨೫೦೦ ರೂ. ಆರ್ಥಿಕ ಸಹಕಾರ ನೀಡಿದ್ದು ಉಲ್ಲೇಖನೀಯ. ಆಗಿನ ಕಾಲಕ್ಕೆ ಪತ್ರಿಕೆಗೆ 1000 ಚಂದಾದಾರರಾಗಿದ್ದೇ ವಿಶೇಷ ಸಂಗತಿ.

ಇಂಗ್ಲೀಷ್ ಭಾಷೆಯಲ್ಲಿ ಅಂಬೇಡ್ಕರ್ ಪ್ರಭುತ್ವ ಹೊಂದಿದ್ದರೂ ಮರಾಠಿಯಲ್ಲೇ ಪತ್ರಿಕೆ ಹೊರಡಿಸುತ್ತಿದ್ದರು ಕಾರಣ ತಮ್ಮ ಜನರಿಗೆ ಸರಳವಾಗಿ ಅರ್ಥೈಸಲು. ಏಪ್ರಿಲ್ 3, 1927ರಲ್ಲಿ ಅಂಬೇಡ್ಕರ್ ’ಬಹಿಷ್ಕೃತ ಭಾರತ’ ಎಂಬ ಎರಡನೇ ಪತ್ರಿಕೆ ಆರಂಭಿಸಿದರು. ತಥಾಕಥಿತ ಮೇಲ್ವರ್ಗದವರಿಂದ ನಡೆಯುತ್ತಿದ್ದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ತಾರತಮ್ಯಗಳ ವಿರುದ್ಧ ಪ್ರಬಲ ಧ್ವನಿಯಾಗಿ ಬಹಿಷ್ಕೃತ ಭಾರತ ಹೊರಹೊಮ್ಮಿತು. ಇದು ಕೂಡ ಮರಾಠಿ ಭಾಷೆಯ ಪಾಕ್ಷಿಕ ಪತ್ರಿಕೆಯಾಗಿ ದಲಿತ ಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಿತು. 19 ನವೆಂಬರ್, 1929ರ ವರೆಗೆ ಎರಡು ವರ್ಷಗಳ ಕಾಲ ನಡೆದ ಪತ್ರಿಕೆಯಲ್ಲಿ ಅಂಬೇಡ್ಕರ್ರು ಆಗಿನ ಪ್ರಚಲಿತ ವಿದ್ಯಮಾನ ಹಾಗೂ ದಲಿತರ ವಿಷಯಗಳ ಕುರಿತು ಅಂಕಣ ಬರೆದಿದ್ದರು. ಅಂಬೇಡ್ಕರ್ ಕೈಗೊಂಡ ಮಹಾಡ್ ಸತ್ಯಾಗ್ರಹ – ಸವರ್ಣೀಯರಿಗೆ ಮೀಸಲಾದ ಚೌದಾರ್ ಕೆರೆಯ ನೀರು ಕುಡಿದ ಘಟನೆಯ ವಿಶ್ಲೇಷಣೆ, ನಾಸಿಕದ ಕಾಲಾರಾಮ ದೇವಾಲಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿಷೇಧಕ್ಕಾಗಿ ಮಾಡಿದ ಸತ್ಯಾಗ್ರಹವನ್ನು ಬಹಿಷ್ಕೃತ ಭಾರತ ಕಟುವಾಗಿ ಟೀಕಿಸುವುದರ ಜೊತೆಗೆ ದಲಿತರ ಹೋರಾಟಕ್ಕೆ ಬೆಂಬಲವಾಗಿತ್ತು.

1928ರಲ್ಲಿ ಪತ್ರಿಕೆಯ ಆರ್ಥಿಕ ಹಿತದೃಷ್ಟಿಯಿಂದ ’ಸಮತಾ’ (ಮುಂದೆ ’ಜನತಾ’ ಎಂದು ಮರುನಾಮಕರಣ) ಎಂಬ ಪತ್ರಿಕೆ ಅಂಬೇಡ್ಕರ ಅವರ ಮಾರ್ಗದರ್ಶನದಲ್ಲಿ ಕೆಲ ಕಾಲ ನಡೆಯಿತು. 1956 ಫೆಬ್ರವರಿ 4ರಂದು ಚಾಲನೆಗೊಂಡ ’ಪ್ರಬುದ್ಧ ಭಾರತ’ ಸಾಪ್ತಾಹಿಕ ಪತ್ರಿಕೆಯೂ ಸಹ ಮೂಕನಾಯಕ ಹಾಗೂ ಬಹಿಷ್ಕೃತ ಭಾರತದ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಿತು. ಅವರು ಮಹಾಪರಿನಿರ್ವಾಣ ಹೊಂದುವ ತನಕ ಪ್ರಬುದ್ಧ ಭಾರತ ಪತ್ರಿಕೆ ಚಾಲನೆಯಲ್ಲಿತ್ತು.

ಆಗಿನ ಕಾಲಕ್ಕೆ ಇಡೀ ದೇಶದ ಎಲ್ಲ ಪತ್ರಿಕೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಸಿಡಿದೆದ್ದರೆ, ಅಂಬೇಡ್ಕರರ ಪತ್ರಿಕೆಗಳು ಶೋಷಿತರ ಏಳಿಗೆ, ಸಮಾನತೆಗೆ ಧ್ವನಿಯಾಗಿದ್ದವು. ತಮ್ಮ ಪತ್ರಿಕಾ ಲೋಕದ ಪಯಣದುದ್ದಕ್ಕೂ ವೃತ್ತಿ ಧರ್ಮ, ಮೌಲ್ಯ, ವಸ್ತುನಿಷ್ಠತೆ, ಗುಣಾತ್ಮಕತೆಗಳಲ್ಲಿ ರಾಜಿಯಾಗದೆ ಉತ್ತಮ ಪತ್ರಿಕೋದ್ಯೋಗಿ ಎಂಬುದಕ್ಕೆ ಡಾ. ಬಾಬಾಸೇಹೆಬ್ ಅಂಬೇಡ್ಕರ್ ನಿದರ್ಶನರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!