September 20, 2026
Sunday, September 20, 2026
spot_img

ಹುಡುಗಿ ಆಮಿಷ ಒಡ್ಡಿ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಆ್ಯಪ್‌ ಮೂಲಕ ಹುಡುಗಿಯರ ಆಸೆ ತೋರಿಸಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಭೀಕರ ಹನಿಟ್ರ್ಯಾಪ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚೇತನ್ ಮನು, ಶಾಬು, ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು ಹಾಗೂ ಸಂದೀಪ್ ಸೇರಿದಂತೆ ಒಟ್ಟು 11 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಆಟೋದಲ್ಲಿ ಕಿಡ್ನ್ಯಾಪ್, ನಗರವಿಡೀ ರೌಂಡ್ಸ್!

ಆರೋಪಿಗಳು ಮೊದಲು ಆ್ಯಪ್‌ ಒಂದರಲ್ಲಿ ಯುವತಿಯರ ಫೋಟೋ ಹಾಕಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಇದನ್ನು ನಂಬಿದ ವ್ಯಕ್ತಿಯೊಬ್ಬರು ಹುಡುಗಿಯರನ್ನು ಭೇಟಿಯಾಗಲು ಕೆ.ಜಿ. ಹಳ್ಳಿಯ ಹೆಚ್‌ಆರ್‌ಬಿಆರ್ ಲೇಔಟ್‌ ಬಳಿ ಬಂದಿದ್ದರು. ಅಲ್ಲಿ ಆಟೋದಲ್ಲಿ ಯುವತಿಯರು ಕುಳಿತಿದ್ದನ್ನು ಕಂಡು ಸಂತ್ರಸ್ತರು ಹತ್ತಿರ ಹೋಗುತ್ತಿದ್ದಂತೆ, ಆರೋಪಿಗಳು ಏಕಾಏಕಿ ಅವರನ್ನು ಅಪಹರಿಸಿದ್ದಾರೆ. ತದನಂತರ ನಗರದಾದ್ಯಂತ ಆಟೋದಲ್ಲಿ ಸುತ್ತಾಡಿಸಿ, ಬೆದರಿಕೆ ಹಾಕಿ ಅವರ ಬಳಿಯಿದ್ದ ನಗದು, ಚಿನ್ನದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಈ ದರೋಡೆ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತಕ್ಷಣವೇ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿ 11 ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಆಟೋಗಳು, 4 ಬೈಕ್‌ಗಳು, 13 ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ್ದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪರಿಚಿತ ಆ್ಯಪ್‌ಗಳ ಆಮಿಷಕ್ಕೆ ಸಾರ್ವಜನಿಕರು ಬಲಿಯಾಗಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !