November 6, 2026
Friday, November 6, 2026
spot_img

ವರುಷದ ಮೋಸ್ಟ್ ವೈರಲ್ ಟೈಮ್‌ಲೈನ್: ನವೆಂಬರ್ 13 ಈ ದಿನ ಈಗ ಇಂಟರ್ನೆಟ್‌ನ ಹಾಟ್ ಟಾಪಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಸಮನೆ ಒಂದು ಸುದ್ದಿ ಭಾರಿ ವೈರಲ್ ಆಗುತ್ತಿದೆ. “ನವೆಂಬರ್ 3 ರಿಂದ 13ರ ತನಕ ಅತ್ಯಂತ ಕಂಟಕದ ಸಮಯ. ನವೆಂಬರ್ 13ರಂದು ಇಡೀ ಮಾನವಕುಲಕ್ಕೆ ಕೊನೆಯ ದಿನ” ಎಂದೆಲ್ಲಾ ಪೋಸ್ಟ್‌ಗಳು ಹರಿದಾಡುತ್ತಿವೆ. ಲಕ್ಷಾಂತರ ಜನರು ಈ ವಿಡಿಯೋ, ಪೋಸ್ಟ್‌ಗಳನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಈ ಸುದ್ದಿಯ ಹಿಂದಿನ ಅಸಲಿ ಕಥೆ ಏನು? ಇಲ್ಲಿದೆ ಸಂಪೂರ್ಣ ವಿವರ.

‘Doomsday’ ಸುದ್ದಿ ಶುರುವಾಗಿದ್ದು ಎಲ್ಲಿಂದ?

ಈ ವೈರಲ್ ಸುದ್ದಿಯ ಮೂಲ ಇತ್ತೀಚಿನದ್ದಲ್ಲ. ಇದು ಬರೋಬ್ಬರಿ 66 ವರ್ಷಗಳ ಹಿಂದೆ ಅಂದರೆ 1960ರಲ್ಲಿ ಶುರುವಾಗಿದ್ದು. 1960ರ ನವೆಂಬರ್ ತಿಂಗಳಲ್ಲಿ ಅಮೆರಿಕದ ಪ್ರಸಿದ್ಧ ‘ಸೈನ್ಸ್’ ನಿಯತಕಾಲಿಕೆಯಲ್ಲಿ ಒಂದು ರಿಸರ್ಚ್ ಪೇಪರ್ ಪ್ರಕಟವಾಗಿತ್ತು. ಅದರ ಶೀರ್ಷಿಕೆ “Doomsday: Friday, 13 November, A.D. 2026”. ಆಸ್ಟ್ರಿಯಾ ಮೂಲದ ಭೌತಶಾಸ್ತ್ರಜ್ಞ ಹೈಂಜ್ ವೋನ್ ಫೋಯೆರ್ಸ್ಟರ್ ಮತ್ತು ಅವರ ತಂಡ ಈ ರಿಸರ್ಚ್ ಪೇಪರ್ ಅನ್ನು ಪ್ರಕಟಿಸಿದ್ದರು.

ವಿಜ್ಞಾನಿ ಹೇಳಿದ್ದೇನು?

ಆಗಿನ ಸಮಯದಲ್ಲಿ ಜನಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದ್ದರಿಂದ, ಹೈಂಜ್ ವೋನ್ ಫೋಯೆರ್ಸ್ಟರ್ ಅವರು ಹಿಂದಿನ 2,000 ವರ್ಷಗಳ ಜನಸಂಖ್ಯಾ ಬೆಳವಣಿಗೆಯನ್ನು ಅಧ್ಯಯನ ಮಾಡಿ, ಒಂದು ಗಣಿತದ ಸೂತ್ರವನ್ನು ತಯಾರಿಸಿದರು. ಆ ಗಣಿತದ ಲೆಕ್ಕಾಚಾರದ ಪ್ರಕಾರ, ಜನಸಂಖ್ಯೆ ಇದೇ ವೇಗದಲ್ಲಿ ಬೆಳೆಯುತ್ತಾ ಹೋದರೆ, ಒಂದು ಹಂತದಲ್ಲಿ ಭೂಮಿಯ ಮೇಲೆ ಜಾಗವೇ ಸಾಲುವುದಿಲ್ಲ. ಮನುಷ್ಯರು ಆಹಾರದ ಕೊರತೆ ಅಥವಾ ಅಣುಬಾಂಬ್‌ಗಳಿಂದ ಸಾಯುವುದಿಲ್ಲ, ಬದಲಿಗೆ “ಸ್ಥಳವಿಲ್ಲದೆ, ಒಬ್ಬರನ್ನೊಬ್ಬರು ನೂಕಾಡಿಕೊಂಡು, ಜಾಗವಿಲ್ಲದೆ ಮೆಟ್ಟಿ ಸಾಯುತ್ತಾರೆ” ಎಂದು ಅವರು ಆ ರಿಸರ್ಚ್‌ನಲ್ಲಿ ತಮಾಷೆಯಾಗಿ ಹಾಗೂ ಎಚ್ಚರಿಕೆಯ ರೂಪದಲ್ಲಿ ಬರೆದಿದ್ದರು.

ಆ ಗಣಿತದ ಲೆಕ್ಕಾಚಾರವು ‘ಇನ್ಫಿನಿಟಿ’ ಅಥವಾ ತುತ್ತತುದಿ ತಲುಪುವ ದಿನಾಂಕವೇ ನವೆಂಬರ್ 13 ಎಂದು ತೋರಿಸಿತ್ತು. ವಿಶೇಷವೆಂದರೆ, ಆ ದಿನ ನವೆಂಬರ್ 13 ಅವರ ಸ್ವಂತ ಹುಟ್ಟುಹಬ್ಬವಾಗಿದ್ದರಿಂದ ಅವರು ಅದೇ ದಿನಾಂಕವನ್ನು ಅದಕ್ಕೆ ಆಯ್ಕೆ ಮಾಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದೇಕೆ?

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳು 1960ರ ಈ ಹಳೆಯ ರಿಸರ್ಚ್ ಪೇಪರ್ ಅನ್ನು ಹುಡುಕಿ ತೆಗೆದಿದ್ದಾರೆ. ಜನರಲ್ಲಿ ಭಯ ಹುಟ್ಟಿಸಿ ವೀವ್ಸ್ ಪಡೆಯಲು, ನವೆಂಬರ್ 3 ರಿಂದ 13 ರವರೆಗಿನ ಸಮಯವನ್ನು “ಅತ್ಯಂತ ಅಪಾಯಕಾರಿ ಕೌಂಟ್‌ಡೌನ್” ಎಂದು ಬಿಂಬಿಸಿ ವಿಡಿಯೋಗಳನ್ನು ಮಾಡಲು ಶುರುಮಾಡಿದರು. ನವೆಂಬರ್ 13 ಶುಕ್ರವಾರ ಬರುವುದರಿಂದ ಅದಕ್ಕೆ ‘ಫ್ರೈಡೇ ದಿ 13th’ ಎಂಬ ಭಯಾನಕ ಆಯಾಮವನ್ನೂ ಕೊಟ್ಟು, ‘ಪ್ರಳಯದ ದಿನ’ ಅಥವಾ ‘Doomsday’ ಎಂದು ಬಿಂಬಿಸಲಾಗುತ್ತಿದೆ.

‘Doomsday’ ಎಂದು ಹೆಸರಿಟ್ಟಿದ್ದಾದರೂ ಯಾಕೆ?

ನಾಸಾ ಪ್ರಕಾರ, ಈ ನವೆಂಬರ್ ಅವಧಿಯಲ್ಲಿ ಕೆಲವು ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಕಕ್ಷೆಯ ಸಮೀಪದಿಂದ ಹಾದುಹೋಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಇವು ಭೂಮಿಗೆ ಬಂದು ಅಪ್ಪಳಿಸುತ್ತವೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಈ ದಿನಗಳಲ್ಲಿ ಗ್ರಹಗಳ ಅಪರೂಪದ ಜೋಡಣೆ ಮತ್ತು ಸೂರ್ಯಗ್ರಹಣ/ಚಂದ್ರಗ್ರಹಣಗಳ ಪ್ರಭಾವದಿಂದ ಜಗತ್ತಿನಾದ್ಯಂತ ಭೂಕಂಪ, ಸುನಾಮಿ ಅಥವಾ ಯುದ್ಧಗಳು ಸಂಭವಿಸುತ್ತವೆ ಎಂಬ ವದಂತಿಗಳು ಹರಡಿವೆ.

ಅಮೆರಿಕದ ಚುನಾವಣೆಗಳು, ಜಾಗತಿಕ ಯುದ್ಧದ ಸನ್ನಿವೇಶಗಳು ಮತ್ತು ಆರ್ಥಿಕ ಕುಸಿತದ ಮುನ್ಸೂಚನೆಗಳು ಸಹ ಈ ದಿನಾಂಕಗಳ ಆಸುಪಾಸಿನಲ್ಲೇ ಇರುವುದರಿಂದ, ಜನರು ಇದನ್ನು ‘ಮಹಾ ವಿನಾಶದ ಸಮಯ’ ಎಂದು ಬಿಂಬಿಸುತ್ತಿದ್ದಾರೆ.

ಇದರ ಹಿಂದಿನ ಅಸಲಿ ಕಥೆ ಏನು?

ಇಂಟರ್ನೆಟ್ ಜಗತ್ತಿನಲ್ಲಿ ‘ಮಾರ್ಕೆಟಿಂಗ್’ ಮಾಡಲು ಭಯಕ್ಕಿಂತ ದೊಡ್ಡ ಅಸ್ತ್ರವಿಲ್ಲ. ವೀಡಿಯೋಗಳಿಗೆ ಮಿಲಿಯನ್‌ಗಟ್ಟಲೆ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಕ್ರಿಯೇಟರ್‌ಗಳು ಈ ರೀತಿ ‘ಪ್ರಳಯ’ದ ಕಥೆಗಳನ್ನು ಹೆಣೆಯುತ್ತಾರೆ.

ಯಾವುದೇ ಖಗೋಳಶಾಸ್ತ್ರಜ್ಞರು ಅಥವಾ ವಿಜ್ಞಾನಿಗಳು ನವೆಂಬರ್ 3 ರಿಂದ 13 ರ ನಡುವೆ ಭೂಮಿಗೆ ಪ್ರಳಯವಾಗುತ್ತದೆ ಎಂದು ಹೇಳಿಲ್ಲ. ಭೂಮಿಯ ಹತ್ತಿರ ಹಾದುಹೋಗುವ ಕ್ಷುದ್ರಗ್ರಹಗಳು ಸುರಕ್ಷಿತ ಅಂತರದಲ್ಲೇ ಸಾಗಲಿವೆ.

ಹಿಂದೆ 2012 ರಲ್ಲೂ “ಮಾಯನ್ ಕ್ಯಾಲೆಂಡರ್ ಮುಗಿಯುತ್ತದೆ, ಜಗತ್ತು ನಾಶವಾಗುತ್ತದೆ” ಎಂದು ಹಬ್ಬಿಸಲಾಗಿತ್ತು. ಅದೇ ಮಾದರಿಯ ಮತ್ತೊಂದು ಡಿಜಿಟಲ್ ವದಂತಿ ಇದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಬರುವ ಇಂತಹ ವದಂತಿಗಳು ಮತ್ತು ಸಸ್ಪೆನ್ಸ್ ವಿಡಿಯೋಗಳನ್ನು ನೋಡಿ ಯಾರೂ ಭಯಪಡುವ ಅಗತ್ಯವಿಲ್ಲ. 66 ವರ್ಷಗಳ ಹಿಂದೆ ಸೃಷ್ಟಿಯಾದ ಒಂದು ಗಣಿತದ ಸರಳ ತಮಾಷೆಯ ರಿಸರ್ಚ್ ಪೇಪರ್ ಅನ್ನು ಇಟ್ಟುಕೊಂಡು, ಇಂದಿನ ಸೋಶಿಯಲ್ ಮೀಡಿಯಾ ಜಗತ್ತು ‘ಪ್ರಳಯ’ದ ಕಥೆ ಕಟ್ಟಿ ವೈರಲ್ ಮಾಡುತ್ತಿದೆ ಅಷ್ಟೇ!

Must Read

Skip to toolbar