September 26, 2026
Saturday, September 26, 2026
spot_img

ವರುಣನ ಅಬ್ಬರಕ್ಕೆ ತತ್ತರಿಸಿದ ಒಡಿಶಾ: ರಸ್ತೆಗಳು ಜಲಾವೃತ, 10 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹಾಗೂ ನದಿಗಳ ನೀರಿನ ಮಟ್ಟ ದಿಡೀರ್ ಏರಿಕೆಯಾಗಿರುವುದರಿಂದ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ನೂರಾರು ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪ್ರಮುಖ ಸಂಚಾರ ಮಾರ್ಗಗಳು ಕಡಿತಗೊಂಡಿವೆ. ಪ್ರವಾಹದ ತೀವ್ರತೆಗೆ ಸಿಲುಕಿದ ಸಾವಿರಾರು ಜನರನ್ನು ರಕ್ಷಿಸಲು ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಪ್ರಸ್ತುತ ವರದಿಗಳ ಪ್ರಕಾರ, ಮಯೂರಭಂಜ್ ಜಿಲ್ಲೆಯ 20 ಬ್ಲಾಕ್‌ಗಳು, ಒಂದು ಮುನ್ಸಿಪಾಲಿಟಿ ಹಾಗೂ ಒಂದು ಎನ್‌ಎಸಿ ಪ್ರದೇಶ ಪ್ರವಾಹಕ್ಕೆ ತುತ್ತಾಗಿವೆ. ಅದರಲ್ಲೂ ಬೆಟ್ನೋಟಿ ಮತ್ತು ಬಡಾಸಾಹಿ ಭಾಗದ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಇಲ್ಲಿನ ಪಾಟಲಿಪುರ, ಕಾಲಮಾ, ಸಾಲಗಾಂವ್ ಸೇರಿದಂತೆ ಹಲವು ಹಳ್ಳಿಗಳ ಮನೆಗಳು ಹಾಗೂ ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದ್ದು, ಜನರ ದೈನಂದಿನ ಬದುಕು ಸಂಪೂರ್ಣ ದುಸ್ತರವಾಗಿದೆ.

ರಸ್ತೆಗಳು ಬಂದ್

ಬುಧಬಲಂಗಾ ನಖರಾ ಸೇತುವೆಯ ಮೇಲೆ ಬರೋಬ್ಬರಿ 2 ರಿಂದ 3 ಅಡಿಗಳಷ್ಟು ನೀರು ಹರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ನೋಟಿಯಿಂದ ಬಡಾಸಾಹಿ ಹಾಗೂ ಮನತ್ರಿಯಿಂದ ಬೈಸಿಂಗಾ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ಪರಿಹಾರ ಸಾಮಗ್ರಿ ತಲುಪಿಸುವುದು ಸವಾಲಾಗಿ ಪರಿಣಮಿಸಿದೆ.

ಹತ್ತು ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

    ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಸದ್ಯ 10,373 ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಾರೆ. ಸಂತ್ರಸ್ತರಿಗಾಗಿ ಜಿಲ್ಲಾದ್ಯಂತ 89 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಹಸಿದವರಿಗೆ ಊಟ ನೀಡಲು 72 ಉಚಿತ ಗಂಜಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಪ್ರವಾಹದ ತೀವ್ರತೆ ಹೆಚ್ಚಿರುವ ಜಾಗಗಳಲ್ಲಿ ಒಡಿಶಾ ವಿಪತ್ತು ರಕ್ಷಣಾ ಪಡೆಯ (ODRAF) 3 ತಂಡಗಳು ಮತ್ತು 18 ಅಗ್ನಿಶಾಮಕ ದಳದ ತಂಡಗಳು ದಿನದ 24 ಗಂಟೆಯೂ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

    ಇದನ್ನೂ ಓದಿ:

    ಶಾಲಾ-ಕಾಲೇಜುಗಳು ರಜೆ ಘೋಷಣೆ

    ಮಯೂರಭಂಜ್ ಜಿಲ್ಲೆಯ ಉದಾಲಾ, ಕಪ್ತಿಪದ ಸೇರಿದಂತೆ ಕೆಲವು ನಗರ ಭಾಗಗಳಲ್ಲಿ ಪ್ರವಾಹದ ನೀರು ಕೊಂಚ ಇಳಿಕೆಯಾಗುತ್ತಿದ್ದು, ಜನಜೀವನ ಹಳಿಗೆ ಮರಳುತ್ತಿದೆ. ರಸ್ತೆಗಳು ಮುಕ್ತವಾಗುತ್ತಿವೆಯಾದರೂ ಪ್ರವಾಹದ ಭೀತಿ ಸಂಪೂರ್ಣವಾಗಿ ದೂರವಾಗಿಲ್ಲ. ಹೀಗಾಗಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು 7 ಬ್ಲಾಕ್‌ಗಳಲ್ಲಿ 1 ರಿಂದ 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ. ಅದೇ ರೀತಿ ತಗ್ಗು ಪ್ರದೇಶದಲ್ಲಿರುವ ಜನರು ಜಾಗರೂಕರಾಗಿರಬೇಕು ಮತ್ತು ಅನಗತ್ಯವಾಗಿ ಪ್ರವಾಹದ ನೀರಿನಲ್ಲಿ ಓಡಾಡಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ..

    Must Read