ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಒಡಿಸ್ಸಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದಾಗಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಲುಕಿದ್ದ ರಾಜ್ಯದ ಕ್ರೀಡಾಪಟುಗಳು ಸುರಕ್ಷತವಾಗಿ ರಾಜ್ಯಕ್ಕೆ ವಾಪಸಾಗಿದ್ದಾರೆ. ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ನಡೆಯುತ್ತಿದ್ದ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳಲು ರಾಜ್ಯದ 24 ಜನ ಕ್ರೀಡಾಪಟುಗಳು ಹಾಗೂ ಅವರವರ ಕೋಚ್ ಸೇರಿದಂತೆ ಒಟ್ಟು 32 ಜನ ತೆರಳಿದ್ದರು.
ಆದರೆ, ಭೀಕರ ರೈಲು ದುರಂತದಿಂದಾಗಿ ರಾಜ್ಯಕ್ಕೆ ಮರಳಿ ವಾಪಸಾಗಲು ಸಾಧ್ಯವಾಗದೆ ಕ್ರೀಡಾಪಟುಗಳು ಪರಿತಪಿಸುತ್ತಿದ್ದರು. ಸದ್ಯ ಅವರನ್ನು ವಿಮಾನದ ಮೂಲಕ ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಹೌರಾದಲ್ಲಿ ಸಿಲುಕಿದ್ದ ಎಲ್ಲಾ ಕ್ರೀಡಾಪಟುಗಳು ವಾಪಸ್ ಆಗಿದ್ದಾರೆ. ಇಂಡಿಗೋ ವಿಮಾನದ ಮೂಲಕ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ ಅವರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ತಮ್ಮನ್ನು ಸರುಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆಸಿಕೊಂಡಿದ್ದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಕೋಚ್ ಹಾಗೂ ಕ್ರೀಡಾಪಡುಗಳು ಧನ್ಯವಾದಗಳನ್ನು ತಿಳಿಸಿದರು.
ರೈಲು ಅಪಘಾತದಿಂದಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಯಾವುದೇ ರೈಲುಗಳಿಲ್ಲ ಮತ್ತು ತರಬೇತುದಾರರ ಕೋರಿಕೆಯ ಮೇರೆಗೆ ಈ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ನಿನ್ನೆ ತಿಳಿಸಿತ್ತು.