ನ. 11ರಂದು ರಾಜ್ಯದಲ್ಲಿ ಅಮೃತ-2 ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಬೈರತಿ ಬಸವರಾಜು

ಹೊಸದಿಗಂತ ವರದಿ, ಕಲಬುರಗಿ
ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ 9,000 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ನಿರ್ಮಿಸಲಾಗುತ್ತಿರುವ ಅಮೃತ-2 ಬೃಹತ್ ಕುಡಿಯುವ ನೀರು ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುವ ನವೆಂಬರ್ 2ಕ್ಕೆ ಚಾಲನೆ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ.ಬಸವರಾಜು ಅವರು ಹೇಳಿದರು.
ನ.11ಕ್ಕೆ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ರಾಜ್ಯ ಸಕಾರದ ಸಂಕಲ್ಪಕ್ಕೆ ಕೇಂದ್ರ ಸರ್ಕಾರವು ಬೆನ್ನೆಲುಬಾಗಿ ನಿಂತಿದೆ ಎಂದರು.
ರವಿವಾರ ಕಲಬುರಗಿ ನಗರದ ರಾಜಾಪುರ ರಸ್ತೆಯಲ್ಲಿರುವ (ಕೃಷ್ಣಾ ಗ್ರಾಮೀಣ ಬ್ಯಾಂಕ್ ಎದುರುಗಡೆ) ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ 13.86 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ “ಜಲ ಭವನ” ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.
ಜಲ ಭವನ ಕಟ್ಟಡ ಸುಂದರವಾಗಿ ನಿರ್ಮಿಸಲಾಗಿದೆ. ಬದುಕಿಗೆ ನೀರು ಮತ್ತು ಗಾಳಿ ಅತ್ಯಮೂಲ್ಯ. ಪ್ರತಿಯೊಬ್ಬರಿಗೂ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಅಧಿಕಾರಿ-ಸಿಬ್ಬಂದಿಗಳು ಇದನ್ನರಿತು ಎಲ್ಲಿಯೂ ಲೋಪವಾಗದಂತೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಉತ್ತಮವಾಗಿ ಕಾರ್ಯರ್ನಿಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಬೈರತಿ ಬಸವರಾಜ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಕಲಬುರಗಿ ಪಾಲಿಕೆಗೆ 200 ಕೋಟಿ ರೂ. ನೀಡಿದ್ದು, ಇದು ಖರ್ಚು ಮಾಡಿದ ಬಳಿಕ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಕೇಂದ್ರ ಸರ್ಕಾರವು ಅಮೃತ-2 ಯೋಜನೆಯಡಿ ರಾಜ್ಯಕ್ಕೆ 9,000 ಕೋಟಿ ರೂ. ಮಂಜೂರು ಮಾಡಿದೆ. ಇದರಿಂದ ರಾಜ್ಯದ 160 ಪೌರ ಸಂಸ್ಥೆಗಳಿಗೆ (ಶೇ.80ರಷ್ಟು ಪೌರ ಸಂಸ್ಥೆಗಳು) ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಲಿದೆ. ರಾಜ್ಯಕ್ಕೆ ಕೇಂದ್ರಕ್ಕೆ ಸರ್ಕಾರದ ಬಹುದೊಡ್ಡ ಕೊಡುಗೆ ಇದಾಗಿದೆ ಎಂದು ಬಣ್ಣಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!