ಆಟೊರಿಕ್ಷಾ ಸೇವೆ ನಿಲ್ಲಿಸುವಂತೆ ಒಲಾ-ಉಬರ್ ಗಳಿಗೆ ಕರ್ನಾಟಕ ಸಾರಿಗೆ ಇಲಾಖೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಟೋಗಳ ಮೂಲಕ ವಾಹನ ಸವಾರರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಓಲಾ, ಉಬರ್ ಮತ್ತು ರಾಪಿಡೋ ಕರ್ನಾಟಕ ಸಾರಿಗೆ ಇಲಾಖೆಯು ನೋಟಿಸ್ ನೀಡಿದೆ. ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿರುವುದರಿಂದ ಇನ್ನು ಮುಂದೆ ಓಲಾ, ಉಬರ್, ರಾಪಿಡೋ ಆಟೋಗಳು ಸಂಚರಿಸಬಾರದು ಎಂದು ಆದೇಶ ಹೊರಡಿಸಿದೆ. ಎರಡು ಕಿಲೋಮೀಟರ್‌ಗೆ 100 ರೂ.ನಂತೆ ವಸೂಲಿ ಮಾಡುತ್ತಿದ್ದು, ವಾಹನ ಸವಾರರಿಂದ ಬಂದ ದೂರು ಆಧರಿಸಿ ಕ್ರಮ ಕೈಗೊಂಡಿರುವುದಾಗಿ ನೋಟಿಸ್‌ನಲ್ಲಿ ಸಾರಿಗೆ ಇಲಾಖೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಆಯುಕ್ತ ಟಿ.ಎಚ್.ಎಂ.ಕುಮಾರ್, ಸರಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿ ಅಗ್ರಿಗೇಟರ್‌ಗಳು ತಮ್ಮ ಆಟೋ ರಿಕ್ಷಾ ಸೇವೆಗಳನ್ನು ನಡೆಸುತ್ತಿದ್ದಾರೆ. ಇದರ ಜತೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂತು. ಆದಷ್ಟು ಬೇಗ ಆಟೊ ಸೇವೆ ನಿಲ್ಲಿಸುವಂತೆ ಹಾಗೂ ವಾಹನ ಸವಾರರಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ನೋಟಿಸ್ ಕಳುಹಿಸಿದ್ದೇವೆ. ಅಲ್ಲದೆ, ಇಲಾಖೆಯ ಆದೇಶವನ್ನು ನಿರ್ಲಕ್ಷಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದರು.

ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್ 2016 ರ ಪ್ರಕಾರ ಟ್ಯಾಕ್ಸಿಗಳನ್ನು ಮಾತ್ರ ಓಡಿಸುವಂತೆ ಅಗ್ರಿಗೇಟರ್‌ಗಳಿಗೆ ಪರವಾನಗಿ ನೀಡಲಾಗಿದೆ, ಆಟೋಗಳನ್ನಲ್ಲ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಸ್ಪಷ್ಟಪಡಿಸಿದರು. ಟ್ಯಾಕ್ಸಿ ಎಂದರೆ ಚಾಲಕ ಸೇರಿದಂತೆ ಆರು ಪ್ರಯಾಣಿಕರನ್ನು ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್ ಕ್ಯಾಬ್‌ ಓಡಿಸಲು ಮಾತ್ರ ಅನುಮತಿ ನೀಡಿರುವುದು ಎಂದು ಕುಮಾರ್ ಹೇಳಿದ್ದಾರೆ.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್ ಹೇಮಂತ್ ಕುಮಾರ್ ಕೂಡಾ ಇದನ್ನೇ ಪುನರುಚ್ಚಸಿದರು. ಕ್ಯಾಬ್ ಅಗ್ರಿಗೇಟರ್ ಪರವಾನಗಿಯೊಂದಿಗೆ ಆಟೋರಿಕ್ಷಾಗಳನ್ನು ಓಡಿಸಬಾರದು. ಅಗ್ರಿಗೇಟರ್ ನಿಯಮಗಳು ಕ್ಯಾಬ್‌ಗಳಿಗೆ ಮಾತ್ರ ಅನ್ವಯ ಆಗುತ್ತದೆ. ಅಪ್ಲಿಕೇಶನ್ ಮೂಲಕ ಆಟೋರಿಕ್ಷಾ ಸೇವೆಗಳನ್ನು ನಿಲ್ಲಿಸಿ ಮತ್ತು ಈ ಸಂಬಂಧ ವರದಿ ಸಲ್ಲಿಸಲು ಸಂಸ್ಥೆಗಳಿಗೆ ಕೇಳಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!