Monday, September 26, 2022

Latest Posts

ಸೆ.10 ರಂದು ಜನಸ್ಪಂದನಕ್ಕೆ 3 ಲಕ್ಷ ಜನ: ಸಚಿವ ಡಾ. ಕೆ. ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಬಿಜೆಪಿ ರಾಜ್ಯ ಸರಕಾರದ 3 ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಕಾರ್ಯದ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮವು ಸೆ.10ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಕುರಿತು ಇಂದು ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆಯ ರಘುನಾಥಪುರದ ಎಲ್ ಆಂಡ್ ಟಿ ಮುಂಭಾಗದಲ್ಲಿ ‘ಜನಸ್ಪಂದನ’ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಮತ್ತು ವೀಕ್ಷಣೆ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 2 ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. 2 ವರ್ಷಗಳಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್‍ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುವುದಾಗಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲ್ಲೂಕುಗಳಿಂದ ಜನರು ಬರಲಿದ್ದು, ಬಿಜೆಪಿಯ ದೊಡ್ಡ ಜನಸಭೆ ಇದಾಗಲಿದೆ. ರಾಜ್ಯದ ಆರು ವಲಯಗಳಲ್ಲಿ ಇಂಥ ಜನಸಭೆ ಏರ್ಪಡಿಸಲಾಗುವುದು. ಈ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಪ್ರಶ್ನಿಸುವವರಿಗೆ ಇದು ಉತ್ತರ ನೀಡಲಿದೆ ಎಂದು ಆಶಿಸಿದರು.

ಇಲ್ಲಿನ 40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಇದರ ಗುತ್ತಿಗೆ ಕೊಡಲಾಗಿದೆ ಎಂದು ವಿವರ ನೀಡಿದರು.

3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಷಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12 ಕಡೆ ಜಾಗಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಿದ್ದು, ಮನವಿ ಮಾಡಿದ್ದೇವೆ ಎಂದರು.

ಕೋವಿಡ್ ಸಂಕಷ್ಟವನ್ನು ನಮ್ಮ ಸರಕಾರ ಎದುರಿಸಿ ಶೇಕಡಾ 100 ಕನ್ನಡಿಗರಿಗೆ ಲಸಿಕೆ ನೀಡಿ ಅದನ್ನು ಮಣಿಸುವ ಪ್ರಯತ್ನ ಮಾಡಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸೇರಿದಂತೆ 3 ಬಾರಿ ಅತಿವೃಷ್ಟಿಯನ್ನು ನಮ್ಮ ಸರಕಾರ ಸಮರ್ಥವಾಗಿ ಎದುರಿಸಿದೆ. ಬೊಮ್ಮಾಯಿಯವರು ರೈತರ ಮಕ್ಕಳಿಗೆ ವಿದ್ಯಾಸಿರಿ ಪ್ರಕಟಿಸಿದ್ದಾರೆ. ಇಡೀ ದೇಶದಲ್ಲಿ ನಮ್ಮ ರಾಜ್ಯ ಮೊದಲನೆಯದು ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ. ಇದರಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಲಭಿಸುತ್ತಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ 75 ಯೂನಿಟ್ ವಿದ್ಯುತ್ ನೀಡುವ ಯೋಜನೆ ಜಾರಿಯಾಗಿದೆ. 700ರಿಂದ 800 ರೂಪಾಯಿ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಸರಕಾರದ ಜನಪರ ಯೋಜನೆಗಳನ್ನು ಜನರ ಮುಂದಿಡುತ್ತೇವೆ. ನೂತನ ಶಿಕ್ಷಣ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದೇವೆ. ಆರೋಗ್ಯ ವ್ಯವಸ್ಥೆಯಲ್ಲಿ ಕೇವಲ 2 ವರ್ಷಗಳಲ್ಲಿ ಆರೇಳು ಪಟ್ಟುಗಳಷ್ಟು ಮೂಲಸೌಕರ್ಯ ವೃದ್ಧಿಯಾಗಿದೆ. ವೈದ್ಯರ ತೀವ್ರ ಕೊರತೆಯನ್ನು ನೀಗಿಸಲಾಗಿದೆ; ಆರೋಗ್ಯವಂತ ಕರ್ನಾಟಕ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!