ಹೊಸ ದಿಗಂತ ವರದಿ,ಮಡಿಕೇರಿ:
ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ,ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಸತ್ಯನಗರದ ನಿವಾಸಿ ಇಲಿಯಾಸ್ (47) ಎಂಬವನೇ ಬಂಧಿತ ಆರೋಪಿಯಾಗಿದ್ದು, ಆತನಿಂದ 30 ಕೆಜಿ 550 ಗ್ರಾಂ ಗಾಂಜಾ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕಿರುಮಕ್ಕಿ ಜಂಕ್ಷನ್ ಸಮೀಪ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು,ಮಾರಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ಸಿಪಿಐ ಅನೂಪ್ ಮಾದಪ್ಪ, ವೀರಾಜಪೇಟೆ ನಗರ ಠಾಣೆ ಪಿಎಸ್ಐ ಬಿ.ಎಸ್. ವಾಣಿಶ್ರೀ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ಅಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.