ಮತಗಟ್ಟೆ ಅಧಿಕಾರಿ ಕೊಠಡಿಗೆ ಐವರಿಗೆ ಮಾತ್ರ ಪ್ರವೇಶ: ಡಿಸಿ ರಘುನಂದನ್ ಮೂರ್ತಿ

ಹೊಸದಿಗಂತವರದಿ ಹಾವೇರಿ:

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏ.12ರ ಶುಕ್ರವಾರ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.12ರಿಂದ ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಏ.19ರವರೆಗೆ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ ಹಾಲ್‌ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆಗೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಸ್ಥಾಪಿಸಿರುವ ಗಡಿಯಾರದಲ್ಲಿ ತೋರಿಸುವ ಸಮಯವನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ.

ಮಧ್ಯಾಹ್ನ 3ಗಂಟೆ ನಂತರ ಯಾವುದೇ ಕಾರಣಕ್ಕೂ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾರ್ವತ್ರಿಕ ರಜಾ ದಿನವಾದ ಏ.13 ಹಾಗೂ 14ರಂದು ನಾಮಪತ್ರ ಸ್ವೀಕರಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.7ರಂದು ಬೆಳಿಗ್ಗೆ 7ರಿಂದ 6ಗಂಟೆವರೆಗೆ ಮತದಾನ ನಡೆಯಲಿದೆ. ಜೂ.4ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಹಲವು ಷರತ್ತು: ಚುನಾವಣಾಧಿಕಾರಿಗಳ ಕಚೇರಿಯ ಕಾರ್ಯಾಲಯದ 100 ಮೀಟರ್ ಪರಿಧಿಯೊಳಗೆ ಅಭ್ಯರ್ಥಿಯ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ. ನಾಮಪತ್ರಗಳ ಸ್ವೀಕೃತಿ ಕೊಠಡಿಯೊಳಗೆ ಐದು ಜನರಿಗೆ ಮಾತ್ರ ಪ್ರವೇಶವಿರುತ್ತದೆ. ಅಭ್ಯರ್ಥಿ, ಒಬ್ಬ ಸೂಚಕರು ಹಾಗೂ ಇತರೆ ಮೂರು ಜನರಿಗೆ ಅಥವಾ ಅಭ್ಯರ್ಥಿ ಜೊತೆಗೆ ಇತರ ನಾಲ್ವರಿಗೆ, ಅಥವಾ ಅಭ್ಯರ್ಥಿ ಪರ ಸೂಚಕ ನಾಮಪತ್ರ ಸಲ್ಲಿಸಲು ಇಚ್ಚಿಸಿದರೆ ಅವರೊಂದಿಗೆ ಇತರೆ ನಾಲ್ವರಿಗೆ ನಾಮಪತ್ರ ಸಲ್ಲಿಕೆ ವೇಳೆ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಮಾನ್ಯತೆ ಪಡೆದ ನೋಂದಾಯಿತ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ತಲಾ ಒಬ್ಬ ಸೂಚಕರನ್ನು ಹಾಗೂ ನೋಂದಾಯಿತ ಮತ್ತು ಪಕ್ಷೇತರ ಅಭ್ಯರ್ಥಿಗಳು ಹತ್ತು ಜನ ಸೂಚಕರ ಸಹಿಯೊಂದಿಗೆ ನಾಮಪತ್ರ ಸಲ್ಲಿಸಬೇಕು. ಅಭ್ಯರ್ಥಿ ಯಾವುದೇ ಮತಕ್ಷೇತ್ರದವಾಗಿರಬಹುದು. ಆದರೆ ಸೂಚಕರು ಮಾತ್ರ ಹಾವೇರಿ ಲೋಕಸಭಾ ಮತ ಕ್ಷೇತ್ರದವರಾಗಿರಬೇಕು ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ಸಲ್ಲಿಸುವಿಕೆ ಸಂದರ್ಭದಲ್ಲಿ ನಡೆಸಲಾಗುವ ಯಾವುದೇ ರ‍್ಯಾಲಿ ಮತ್ತು ಪ್ರಚಾರ ಸಭೆಗಳಿಗೆ ಅನುಮತಿ ಕಡ್ಡಾಯವಾಗಿದೆ. ಈ ಸಭೆ-ಸಮಾರಂಭಗಳ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

ಮತದಾನದ ದಿನ ಗೈರಾಗಬಹುದಾದ ಅಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ 12ಡಿ ವಿತರಿಸಲಾಗಿತ್ತು. ಈ ಪೈಕಿ 550 ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಶೀಘ್ರದಲ್ಲೇ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!