ಎಫ್‌ಆರ್‌ಪಿ ಆಧಾರದಲ್ಲಿ ರೈತರಿಗೆ ಹಣ ನೀಡಿದ್ದು ನಮ್ಮ ರಾಜ್ಯ ಮಾತ್ರ: ಶಂಕರ ಪಾಟೀಲ ಮುನೇನಕೊಪ್ಪ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ದೇಶದಲ್ಲಿ ಎಫ್‌ಆರ್‌ಪಿ ಆಧಾರದಲ್ಲಿ ಕಳೆದ ಎರಡು ವರ್ಷಗಳಿಂದ ರೈತರಿಗೆ ಹಣ ನೀಡಿದ್ದು ನಮ್ಮ ರಾಜ್ಯ ಮಾತ್ರ. ಎಫ್‌ಆರ್‌ಪಿ ಮೇಲೆ ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ ಎಂದು ಕಬ್ಬು ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಭಾರತದಲ್ಲಿ ಕಬ್ಬಿನ ಬಾಕಿ ಹಣ ನೀಡದ ಕಾರಣ ರೈತರು ರಸ್ತೆ ಇಳಿದಿದ್ದಾರೆ. ಎಫ್‌ಆರ್‌ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ. ರಾಜ್ಯದಲ್ಲಿ ಇರುವುದು ಎಲ್ಲ ಖಾಸಗಿ ಕಾರ್ಖಾನೆಗಳು. ಖಾಸಗಿ ಕಾರ್ಖಾನೆಗಳು ಹಾಗೂ ರೈತರ ನಡುವೆ ಯಾವುದಾದರೂ ಸಮಸ್ಯೆ ಎದುರಾದರೆ ನಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇವೆ ಎಂದರು.

ರಾಜ್ಯದಲ್ಲಿರುವ ಎಲ್ಲ ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಿವೆ. ಎಲ್ಲಿಯೂ ಕೂಡ ಕಾರ್ಖಾನೆಗಳು ಬಂದ್ ಇಲ್ಲ. ಎಫ್‌ಆರ್‌ಪಿ ಮೇಲೆ ಹೆಚ್ಚಿನ ದರ ನಿಗದಿ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ನ.24 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸುವವರ ಸಭೆ ಹಮ್ಮಿಕೊಳ್ಳಲಾಗಿದೆ. ಅವರ ಲಾಭಾಂಶದಲ್ಲಿ ನೀಡಲು ಕಮಿಟಿ ರಚನೆ ಮಾಡಲಾಗಿತ್ತು. ಆ ಕಮಿಟಿ ವರದಿ ನನ್ನ ಕೈ ಸೇರಿದೆ. ಅದರ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ನಿರಾಣಿ ಕಾರ್ಖಾನೆಯವರು ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ನನಗೆ ದೂರು ಬಂದಿದೆ. ಅದು ಎಫ್‌ಆರ್‌ಪಿ ಮೇಲೆ ಹೆಚ್ಚಿನ ದರ ನೀಡುತ್ತೇನೆ ಎಂದು ಹೇಳಿ ಬಾಕಿ ಉಳಿಸಿಕೊಂಡಿದ್ದಾರೆ. ಅವರೊಂದಿಗೆ ಮಾತನಾಡಿದಾಗ ಶೀಘ್ರದಲ್ಲಿ ಬಾಕಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತೇವಾಂಶವನ್ನು ಗಮನದಲ್ಲಿ ಇಟ್ಟುಕೊಳ್ಳಲಾರದೇ, ರೈತರು ಬೆಳೆದ ಹೆಸರನ್ನು ಖರೀಧಿಸಲು ಜಿಲ್ಲಾಧಿಕಾರಿ ಹಾಗೂ ಎಲ್ಲ ಫೆಡರೇಶನ್‌ಗಳೊಂದಿಗೆ ಮಾತನಾಡಿದ್ದೇನೆ. ಸದ್ಯ ಹೆಸರು ಬೆಳೆಯ ತೇವಾಂಶ ಸಮಸ್ಯೆ ಪರಿಹಾರವಾಗಿದೆ. ಯಾವ ಯಾವ ಕೇಂದ್ರಗಳಲ್ಲಿ ಎಷ್ಟು ಹೆಸರು ಖರೀದಿ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದರೆ ಮತ್ತೆ 15 ದಿನಗಳ ಕಾಲ ಹೆಸರು ಖರೀದಿಯನ್ನು ಮುಂದುವರೆಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!