Saturday, March 25, 2023

Latest Posts

ಆಪರೇಶನ್ ಸೂರ್ಯಾಸ್ತ: ಉಡುಪಿ ಜಿಲ್ಲಾ ಪೋಲಿಸರಿಂದ ನಡೆಯಿತು ವಿಶೇಷ ಕಾರ್ಯಚರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರ ನೇತೃತ್ವದಲ್ಲಿ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಜಿಲ್ಲೆಯಾದ್ಯಂತ ಆಪರೇಶನ್ ಸೂರ್ಯಾಸ್ತ ಹೆಸರಿನಲ್ಲಿ ವಿಶೇಷ ಕಾರ್ಯಚರಣೆ ನಡೆಸಿ, ಗಾಂಜಾ ಸೇವನೆ, ಮಾರಾಟ, ಡ್ರಗ್ಸ್, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಅಕ್ಷಯ್, ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳು ಮತ್ತು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದರು.
ಅನಿರೀಕ್ಷಿತ ತಪಾಸಣೆಯಿಂದಾಗಿ ಗಾಂಜಾ ಮತ್ತು ಎಮ್.ಡಿ.ಎಮ್.ಎ ಗಳನ್ನು ಸಣ್ಣ ಪ್ರಮಾಣದಲ್ಲಿ ಹೊಂದಿದ್ದ ಮೂವರನ್ನು ಬಂಧಿಸಲಾಗಿದೆ. ಜೊತೆಗೆ 45 ಲೀ ಮದ್ಯಪಾನವನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಬೆರಳಚ್ಚು ಸ್ಕ್ಯಾನಿಂಗ್ ಯಂತ್ರದ ಸಹಾಯದಿಂದ ನಿರಂತರ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 60 ಕ್ಕೂ ಹೆಚ್ಚು ಆರೋಪಿಗಳನ್ನು ಪರಿಶೀಲಿಸಲಾಯಿತು.

ವಾಹನಗಳನ್ನು ತಪಾಸಣೆ ನಡೆಸಿ ನಕಲಿ ನಂಬರ್ ಪ್ಲೇಟ್, ಮದ್ಯಪಾನ ಸೇವಿಸಿ ವಾಹನ ಚಾಲನೆ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ದಾಖಲೆ ಇಲ್ಲದ 29 ವಾಹನವನ್ನು ವಶಕ್ಕೆ ಪಡೆಯಲಾಯಿತು. ಮದ್ಯಪಾನ ಸೇವಿಸಿ ವಾಹನ ಚಲಾಯಿಸಿ ಬಗ್ಗೆ 32 ಪ್ರಕರಣ ದಾಖಲಿಸಲಾಯಿತು. ಒಟ್ಟು 258 ಪ್ರಕರಣ ದಾಖಲಿಸಿ, 1,30,000 ರೂ ದಂಡ ಸಂಗ್ರಹವಾಗಿದೆ.

ನಿಷೇಧಿತ ಸ್ಥಳದಲ್ಲಿ ಇ-ಸಿಗರೇಟ್, ತಂಬಾಕು ಗುಟ್ಕಾಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ತಪಾಸಣೆ ನಡೆಸಿ ಕೋಟ್ಟಾ ಕಾಯ್ದೆಯಡಿ 44 ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ 17 ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದೇವೆ ಎಂದರು.

ಜಿಲ್ಲೆಯಾದ್ಯಂತ ವಿವಿಧ ಠಾಣೆಯಲ್ಲಿ ರೌಡಿ ಶೀಟರ್ ಗಳಾಗಿರುವ 65 ಜನರನ್ನು ಅನೀರಿಕ್ಷಿತವಾಗಿ ತಪಾಸಣೆ ನಡೆಸಿ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನಿಗಾವಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!