ಇಂದು ಭಯೋತ್ಪಾದನೆ ವಿರುದ್ಧ ಭಾರತದ ಸಾಮರ್ಥ್ಯ ನೆರೆಹೊರೆ ದೇಶಗಳಿಗೆ ಅರ್ಥವಾಗಿದೆ: ಕೇಂದ್ರ ಸಚಿವ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಜಗ್ಗತ್ತಿನಲ್ಲಿ ಮುಂದುವರಿದ ದೇಶಗಳೂ ಈ ಹಿಂದೆ ಭಯೋತ್ಪಾದನೆಯ ಮುಂದೆ ಸೋತಿದ್ದವು. ಆದರೇ ಭಾರತ ಭಯೋತ್ಪಾದನೆಗೆ ಅಕ್ರಮ ಹಣಕಾಸಿನ ಪೂರೈಕೆಯನ್ನೇ ತಡೆಗಟ್ಟಿ, ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಮಾತಾಡುವಷ್ಟು ಬೆಳೆದಿದೆ. ಉರಿ ಮತ್ತು ಬಾಲಾಕೋಟ್‌ ಘಟನೆಗಳು ಭಯೋತ್ಪಾದನೆಯ ವಿರುದ್ಧ ಭಾರತದ ಸಾಮರ್ಥ್ಯವನ್ನು ನೆರೆಹೊರೆಯ ದೇಶಗಳಿಗೆ ಅರ್ಥ ಮಾಡಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈ ಶಂಕರ್ ಹೇಳಿದರು.

ಅವರು ಭಾನುವಾರ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಕಂಟ್ರಿ‌ ಇನ್ ಹೋಟೆಲಿನಲ್ಲಿ ನಡೆದ ‘ಪ್ರಬುದ್ಧರ ಗೋಷ್ಠಿ’ಯಲ್ಲಿ ಮಾತನಾಡಿದರು.

ಭಾರತದಲ್ಲೀಗ ನಿಜವಾದ ಪ್ರಜಾಪ್ರಭುತ್ವ ಸೃಷ್ಟಿಯಾಗಿದೆ. ವಿಶ್ವದ ಯಾವುದೇ ದೇಶದಲ್ಲಿ ಸಾಧ್ಯವಾಗದ, ಡಿಜಿಟಲ್ ತಂತ್ರಜ್ಞಾನವನ್ನು ಬಡವರಿಗೂ ತಲುಪುವಂತೆ, ಪ್ರಜಾಪ್ರಭುತ್ವ ರೀತಿಯಲ್ಲಿ ವಿತರಿಸಲಾಗಿದೆ ಎಂದರು.

ಭಾರತವು ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿರ್ವಹಿಸಿದ ಬಳಿಕ ಜಗತ್ತಿನ ರಾಷ್ಟ್ರಗಳು ನಮ್ಮ ಕಡೆ ನೋಡುವ ದೃಷ್ಟಿ‌ಕೋನ ಬದಲಾಗಿದ್ದು, ಭಾರತವನ್ನೀಗ ವಿಶ್ವದ ಫಾರ್ಮಸಿ ಮತ್ತು ಡಿಜಿಟಲ್ ಲೀಡರ್ ಎಂದು ಪರಿಗಣಿಸುತ್ತಿವೆ ಎಂದು ಹೇಳಿದರು.

ಕೋವಿಡ್ ನಿಂದಾಗಿ ಜಗತ್ತಿನ ಮೂರನೇ ಒಂದರಷ್ಟು ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಆಹಾರ ಸಹಿತ ಅಗತ್ಯ ವಸ್ತುಗಳ ಕೊರತೆ ಅನುಭವಿಸುತ್ತಿವೆ. ಆದರೇ ಭಾರತ ಈ ಸಮಸ್ಯೆಯಿಂದ ಈಗಾಗಲೇ ಚೇತರಿಸಿಕೊಂಡಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್‌ ಶೆಟ್ಟಿ, ಬಿಜೆಪಿ ಮುಖಂಡ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ‌ ಬಿಜೆಪಿ‌ ಪ್ರಣಾಳಿಕೆ ಸಮಿತಿಯ ಸಹ‌ ಸಂಚಾಲಕ ರವೀಂದ್ರ ಪೈ ಉಪಸ್ಥಿತರಿದ್ದರು. ವಿನೋದ್ ನಾಯಕ್ ಸ್ವಾಗತಿಸಿದರು. ಶ್ರೀನಾಥ‌ ರಾವ್ ನಿರೂಪಿಸಿ, ಶ್ರೀನಿಧಿ ಹೆಗ್ಡೆ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!