ತ್ರಿಶೂಲ ತರಬೇತಿ ಪ್ರಕರಣ ತನಿಖೆಗೆ ವಿಪಕ್ಷಗಳ ಒತ್ತಾಯ ಹಾಸ್ಯಾಸ್ಪದ : ಬಿಜೆಪಿ

ಹೊಸದಿಗಂತ ವರದಿ ಮಡಿಕೇರಿ:

ರಾಜಕೀಯ ಮಾಡಲು ವಿಷಯಗಳಿಲ್ಲದೆ ಪರದಾಡುತ್ತಿರುವ ವಿರೋಧ ಪಕ್ಷಗಳು ಪೊನ್ನಂಪೇಟೆಯಲ್ಲಿ ನಡೆದ ತ್ರಿಶೂಲ ದೀಕ್ಷೆ ಮತ್ತು ಏರ್’ಗನ್ ತರಬೇತಿಯನ್ನು ವೈಭವೀಕರಿಸಿ ತನಿಖೆಗೆ ಒತ್ತಾಯ ಮಾಡುತ್ತಿರುವುದು ಹಾಸ್ಯಾಸ್ಪದವೆಂದು ಜಿಲ್ಲಾ ಬಿಜೆಪಿ ಟೀಕಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅವರು ವಿರೋಧ ಪಕ್ಷಗಳ ನಡೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ. ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಭಜರಂಗದಳದ ವತಿಯಿಂದ ನಡೆದ ಪ್ರಶಿಕ್ಷಣ ವರ್ಗದ ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿ ಶಿಬಿರದಲ್ಲಿ ದೇಶಭಕ್ತಿಯ ಪಾಠ ಮಾಡಲಾಗಿದೆಯೇ ಹೊರತು ದೇಶದ್ರೋಹದ ಸಂದೇಶವನ್ನು ಯಾರೂ ನೀಡಿಲ್ಲ. ದೇಶಪ್ರೇಮ, ಧರ್ಮ ಮತ್ತು ಆತ್ಮರಕ್ಷಣೆಯ ವಿಚಾರದ ಪ್ರಶಿಕ್ಷಣ ವರ್ಗ ಯಾವುದೇ ಪ್ರಚಾರ ಮತ್ತು ಅಬ್ಬರವಿಲ್ಲದೆ ನಡೆದಿದೆ. ಈ ಶಿಬಿರದ ಒಂದು ಭಾಗವಾಗಿ ತ್ರಿಶೂಲ ದೀಕ್ಷೆ ಮತ್ತು ಏರ್’ಗನ್ ತರಬೇತಿ ನೀಡಲಾಗಿತ್ತೇ ಹೊರತು ದೇಶ ವಿರೋಧಿ ಚಟುವಟಿಕೆಯನ್ನು ನಡೆಸಿಲ್ಲ. ಕಾಯ್ದೆಯ ಪ್ರಕಾರ ಏರ್’ಗನ್ ಖರೀದಿಸಲು ಮತ್ತು ಬಳಸಲು ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಓಟು ಬ್ಯಾಂಕ್’ಗಾಗಿ ರಾಜಕೀಯ: ಕಾನೂನಿನ ಬಗ್ಗೆ ಅರಿವಿಲ್ಲದ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‍ಡಿಪಿಐ ಪಕ್ಷಗಳು ಕೇವಲ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್‍ಗಾಗಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿವೆ. ಆಡಳಿತ ಪಕ್ಷವನ್ನು ಎದುರಿಸಲು ಯಾವುದೇ ವಿಚಾರಗಳಿಲ್ಲದೆ ಹತಾಶಗೊಂಡಿರುವ ಈ ಪಕ್ಷಗಳು ಕನಿಷ್ಟ ಏರ್’ಗನ್ ಮತ್ತು ಗನ್ ನಡುವಿನ ವ್ಯತ್ಯಾಸ ತಿಳಿಯದೆ ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಸೋಮವಾರಪೇಟೆಯ ಹೊಸತೋಟದಲ್ಲಿ ನಿಯಮಬಾಹಿರ ತರಬೇತಿ ನಡೆದಿತ್ತು. ಇದರಲ್ಲಿ ಭಾಗಿಯಾಗಿದ್ದ ನಜೀರ್ ಎಂಬಾತ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ. ಈತನ ಚಟುವಟಿಕೆ ಬಗ್ಗೆ ಅಂದು ಬಾಯಿ ಮುಚ್ಚಿ ಕುಳಿತುಕೊಂಡಿದ್ದ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‍ಡಿಪಿಐ ಇಂದು ಆತ್ಮರಕ್ಷಣೆಗಾಗಿ ಅನುಮತಿ ಇಲ್ಲದೆ ಬಳಸಬಹುದಾದ ಏರ್’ಗನ್ ಮೂಲಕ ತರಬೇತಿ ನೀಡಿರುವುದನ್ನು ಪ್ರಶ್ನೆ ಮಾಡಿರುವುದು ಹಾಸ್ಯಾಸ್ಪದವೆಂದು ಮಹೇಶ್ ಜೈನಿ ವ್ಯಂಗ್ಯವಾಡಿದ್ದಾರೆ.

ಏರ್’ಗನ್ ಖರೀದಿಸಲು ಮತ್ತು ಬಳಸಲು ಅನುಮತಿಯ ಅಗತ್ಯವಿಲ್ಲವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಪಷ್ಟಪಡಿಸಿದ್ದು, ಭಜರಂಗದಳದಿಂದ ಯಾವುದೇ ತಪ್ಪು ನಡೆದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ದೇಶಪ್ರೇಮ ಮತ್ತು ಧರ್ಮಜಾಗೃತಿಗಾಗಿ ಹಿಂದೂ ಸಂಘಟನೆಗಳು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಬಿಜೆಪಿಯ ಬೆಂಬಲವಿದೆ. ಇದೇ ಕಾರಣದಿಂದ ಪೊನ್ನಂಪೇಟೆಯಲ್ಲಿ ನಡೆದ ಶಿಬಿರದಲ್ಲಿ ಬಿಜೆಪಿ ಶಾಸಕರುಗಳು ಪಾಲ್ಗೊಂಡಿದ್ದರು. ದೇಶಭಕ್ತಿಯನ್ನೇ ಮೈಗೂಡಿಸಿಕೊಂಡಿರುವ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಾಸಕರುಗಳಿಗೆ ವಿರೋಧ ಪಕ್ಷಗಳ ದೊಣ್ಣೆ ನಾಯಕರ ಅಪ್ಪಣೆಯ ಅಗತ್ಯವಿಲ್ಲವೆಂದು ಮಹೇಶ್ ಜೈನಿ ಕಿಡಿಕಾರಿದ್ದಾರೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!