ಉಪ್ಪಂಗಳ ‘ಕುಟ್ಯಣ್ಣನ ಹೊಟೇಲ್’ಗೆ ಈಗ ತುಂಬಿತು ಹತ್ತು ವರ್ಷ!

ಹೊಸದಿಗಂತ, ಮಂಗಳೂರು:

ಉಪ್ಪಂಗಳ ಕುಟ್ಯಣ್ಣನ ಹೊಟೇಲ್‌ಗೆ ಈಗ ಹತ್ತು ವರ್ಷ!
ಏನಪ್ಪಾ ಇದು ಸ್ಪೆಷಲ್ ಅಂದುಕೊಂಡಿರಾ? ನೀವು ಕಾಸರಗೋಡು ಪರಿಸರದವರಾದರೆ ವಿವರಣೆ ಬೇಡ, ಈ ಹೆಸರು ಖಂಡಿತಾ ಕೇಳಿರುತ್ತೀರಿ. ಅಗಲ್ಪಾಡಿ ಜಾತ್ರೆಗೆ ಕಾಲಿಟ್ಟಿದ್ದರಂತೂ ಕಣ್ಣಾರೆ ಈ ಹೊಟೆಲ್ ಕಂಡಿರುತ್ತೀರಿ. ಇದು ಉಳಿದ ಭಾಗದ ಜನತೆಗೆ ಹೊಟೇಲ್‌ನ ಪರಿಚಯಿಸುವ ಪ್ರಯತ್ನ…

‘ಉಪ್ಪಂಗಳ ಕುಟ್ಯಣ್ಣ’ ಎಂದೇ ಪರಿಚಿತರಾಗಿರುವ ಇವರ ಹೆಸರು ವೆಂಕಟ್ರಮಣ ಭಟ್. ಕುಂಬ್ಡಾಜೆ ಪಂಚಾಯಿತಿಯ ಉಪ್ಪಂಗಳ ನಿವಾಸಿ. ಕಳೆದ ಒಂದುವರೆ ವರ್ಷದಿಂದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಅಡುಗೆ ವೃತ್ತಿ. ಅಪ್ಪಟ ಮೋದಿ ಅಭಿಮಾನಿ.

– ಹೋಟೆಲ್ ನ ರೂವಾರಿ ಅಪ್ಪಟ ಮೋದಿ ಅಭಿಮಾನಿ ವೆಂಕಟ್ರಮಣ ಭಟ್

ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾದ ಸಂದರ್ಭ ಆ ಖುಷಿಯನ್ನು ಹಂಚಿಕೊಳ್ಳಲು ಭಟ್ಟರು, ಅಗಲ್ಪಾಡಿ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ಜಾತ್ರೆಯಲ್ಲಿ ಉಚಿತ ಹೋಟೆಲ್ ನಡೆಸಿದ್ದರು. ನಂತರ ಅದನ್ನೇ ಮುಂದುವರಿಸಿದ ಭಟ್ಟರ ಈ ‘ಉಚಿತ ಹೊಟೇಲ್’ ಈಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ.

ಹೌದಾ? ಇಲ್ಲಿ ಎಲ್ಲಾ ಫ್ರೀಯಾ?
ಹೌದು, ಇಲ್ಲಿ ನಡೆಯುವ ಮೂರು ದಿನಗಳ ಜಾತ್ರೆಯಲ್ಲಿ ತಮ್ಮ ಹೋಟೆಲಿಗೆ ಆಗಮಿಸುವ ಗ್ರಾಹಕರಿಗೆ ಭಟ್ಟರು ಉಚಿತವಾಗಿ ಚಹಾ, ತಿಂಡಿ ವಿತರಿಸುತ್ತಾರೆ. ಹಣ ನೀಡಲು ಮುಂದಾದರೆ, ಸನಿಹದಲ್ಲಿರಿಸಿದ ಪೆಟ್ಟಿಗೆಗೆ ಹಾಕುವಂತೆ ತಿಳಿಸುತ್ತಾರೆ.

ಅಂದಹಾಗೆ ಉಪ್ಪಂಗಳ ಕುಟ್ಯಣ್ಣನ ಹೋಟೆಲ್‌ನಲ್ಲಿ ತಿಂಡಿ ತಿನಿಸುಗಳಿಗೆ ಬೆಲೆ ನಿಗದಿಯಿಲ್ಲ. ಎಷ್ಟು ಬೇಕಾದರೂ ಸೇವಿಸಬಹುದು. ಭಟ್ಟರು ಲಾಭ, ನಷ್ಟದ ಲೆಕ್ಕಾಚಾರ ನೋಡದೆ, ಆತ್ಮಸಂತೃಪ್ತಿಗಾಗಿ ಈ ಕಾಯಕ ಮಾಡುತ್ತಿದ್ದಾರೆ.

ಎಂತ ಭಟ್ರೆ ಲಾಸ್ ಆಗಲ್ವಾ ಕೇಳಿದರೆ, ಎಲ್ಲಾ ದೇವಿಯ ದಯೆ. ನನಗಂತೂ ನಷ್ಟವಾಗಿಲ್ಲ. ಆರಂಭದ ವರ್ಷದಲ್ಲಿ 50 ಸಾವಿರ ರೂ. ಖರ್ಚು ಮಾಡಿ ಉಚಿತ ಹೋಟೆಲ್ ನಡೆಸಿದ್ದೆ. ಸ್ವಲ್ಪ ನಷ್ಟ ಅನುಭವಿಸಿದರೂ, ನಂತರದ ವರ್ಷಗಳಲ್ಲಿ ಅದನ್ನೆಲ್ಲ ಸರಿದೂಗಿಸಲಾಗಿದೆ ಎನ್ನುವ ವೆಂಕಟ್ರಮಣ ಭಟ್ಟರು, ಗ್ರಾಹಕರ ಮುಖದಲ್ಲಿ ಕಾಣುವ ಸಂತೃಪ್ತಿ ನನ್ನ ಈ ಉಚಿತ ಕ್ಯಾಂಟೀನ್ ಸೇವೆಗೆ ಪ್ರೇರಣೆ ಎಂದು ಮುಗುಳ್ನಗುತ್ತಾರೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!