May 20, 2026
Wednesday, May 20, 2026
spot_img

ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ ಪತ್ರಿಕೆಯ ಕಾರ್ಟೂನ್‌ಗೆ ನೆಟ್ಟಿಗರಿಂದ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನಾರ್ವೆ ಭೇಟಿಯ ನಡುವೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ನಾರ್ವೆಯ ಪ್ರಮುಖ ಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ ಪ್ರಧಾನಿ ಮೋದಿಯವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ (Racist) ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ. ಪಾಶ್ಚಿಮಾತ್ಯ ಮಾಧ್ಯಮಗಳ ಈ ಹಳೆಯ ವಸಾಹತುಶಾಹಿ ಮನಸ್ಥಿತಿಯ ವಿರುದ್ಧ ಜಾಗತಿಕ ವೇದಿಕೆಯಲ್ಲಿ ಹಾಗೂ ಇಂಟರ್ನೆಟ್‌ನಲ್ಲಿ ಭಾರತೀಯರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

‘ಆಫ್ಟೆನ್‌ಪೋಸ್ಟನ್’ (Aftenposten) ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರದಲ್ಲಿ, ಪ್ರಧಾನಿ ಮೋದಿ ಹಾವಿನ ಆಕಾರದಲ್ಲಿರುವ ಇಂಧನ ತುಂಬುವ ಪೈಪ್ ಅನ್ನು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ. ಇದನ್ನು “ಒಬ್ಬ ಚಾಣಾಕ್ಷ ಮತ್ತು ಕೊಂಚ ಕಿರಿಕಿರಿ ಉಂಟುಮಾಡುವ ವ್ಯಕ್ತಿ” ಎಂಬ ಶೀರ್ಷಿಕೆಯ ಲೇಖನದೊಂದಿಗೆ ಪ್ರಕಟಿಸಲಾಗಿದೆ.

ನಾರ್ವೆ ಪ್ರಧಾನಿ ಜೋನಾಸ್ ಗಹ್ರ್ ಸ್ಟೋರ್‌ರೊಂದಿಗೆ ಜಂಟಿಯಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಾಗ, ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್, ಭಾರತದ ಪ್ರಧಾನಿ ಮಾಧ್ಯಮಗಳ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ?”ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ಪ್ರಧಾನಿ ಮೋದಿ ಈ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲವಾದರೂ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಈ ವ್ಯಂಗ್ಯಚಿತ್ರ ವಿವಾದ ಮತ್ತಷ್ಟು ತೀವ್ರಗೊಂಡಿದೆ.

ಜನಾಂಗೀಯ ನಿಂದನೆ

ಈ ವ್ಯಂಗ್ಯಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದು ಭಾರತವನ್ನು “ಹಾವಾಡಿಗರ ನಾಡು” ಎಂದು ಬಿಂಬಿಸುತ್ತಿದ್ದ ಹಳೆಯ ಪಾಶ್ಚಿಮಾತ್ಯ ವಸಾಹತುಶಾಹಿಯನ್ನು ನೆನಪಿಸುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬಳಕೆದಾರರೊಬ್ಬರು, “ಈ ಕಾರ್ಟೂನ್ ಸ್ಪಷ್ಟವಾಗಿ ಜನಾಂಗೀಯ ನಿಂದನೆಯಿಂದ ಕೂಡಿದೆ. ಪ್ರಧಾನಿ ಮೋದಿ ಈ ಹಿಂದೆ ‘ಒಂದಾನೊಂದು ಕಾಲದಲ್ಲಿ ಜಗತ್ತು ಭಾರತವನ್ನು ಹಾವಾಡಿಗರ ನಾಡು ಎಂದು ಕರೆಯುತ್ತಿತ್ತು ಎಂದು ಹೇಳುತ್ತಿದ್ದರು. ಆದರೆ ಇಂದು ಅವರು ಓಸ್ಲೋಗೆ ಭೇಟಿ ನೀಡಿದಾಗ ಯುರೋಪಿನ ಪ್ರಮುಖ ಪತ್ರಿಕೆಯೊಂದು ಅವರನ್ನು ಅದೇ ರೀತಿ ಬಿಂಬಿಸಿರುವುದು ವಿಪರ್ಯಾಸ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ಯುರೋಪಿಯನ್ನರು ಇನ್ನು ಕೂಡ ತಮ್ಮ ಹಳೆಯ ವಸಾಹತುಶಾಹಿ ಭ್ರಮೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.

ಈ ಹಿಂದೆ 2022 ರಲ್ಲಿ ಸ್ಪೇನ್‌ನ ಪತ್ರಿಕೆಯೊಂದು ಭಾರತದ ಆರ್ಥಿಕ ಬೆಳವಣಿಗೆಯನ್ನು ವರದಿ ಮಾಡುವಾಗ ಇಂತಹದ್ದೇ ಹಾವಾಡಿಗ ಸಂಕೇತವನ್ನು ಬಳಸಿ ಟೀಕೆಗೆ ಒಳಗಾಗಿತ್ತು. ಪ್ರಧಾನಿ ಮೋದಿ 2014 ರಲ್ಲಿ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಭಾಷಣದಲ್ಲಿ, ಭಾರತ ಹಿಂದೆ ಹಾವಾಡಿಗರ ದೇಶವಾಗಿತ್ತು, ಆದರೆ ಇಂದು ತಂತ್ರಜ್ಞಾನ ಆಧಾರಿತ ‘ಮೌಸ್ ಆಡಿಸುವವರ’ ದೇಶವಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ಹೇಳಿದ್ದರು.

ನಾರ್ವೆಗೆ ಭಾರತದ ತಿರುಗೇಟು

ಪತ್ರಕರ್ತೆ ಹೆಲ್ಲೆ ಲಿಂಗ್, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತು ಕಳವಳ ವ್ಯಕ್ತಪಡಿಸಿ ಪ್ರಶ್ನೆ ಕೇಳಿದ ವಿಡಿಯೋ ವೈರಲ್ ಆದ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜತಾಂತ್ರಿಕ ಅಧಿಕಾರಿ ಸಿಬಿ ಜಾರ್ಜ್, ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಭಾರತದ ಭೌಗೋಳಿಕ ವಿಸ್ತಾರ ಮತ್ತು ಜಟಿಲತೆಯನ್ನು ಅರ್ಥಮಾಡಿಕೊಳ್ಳದ ಕೆಲವು ಅಜ್ಞಾನಿ ಸ್ವಯಂಸೇವಾ ಸಂಸ್ಥೆಗಳು (NGOs) ನೀಡುವ ವರದಿಗಳನ್ನು ಆಧರಿಸಿ ವಿಮರ್ಶಕರು ಅಭಿಪ್ರಾಯ ರೂಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಎಷ್ಟು ಸುದ್ದಿಗಳು ಇರುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಕೇವಲ ದೆಹಲಿಯಲ್ಲೇ ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಕನಿಷ್ಠ 200 ಟಿವಿ ಚಾನೆಲ್‌ಗಳಿವೆ. ಜನರಿಗೆ ಭಾರತದ ವ್ಯಾಪ್ತಿಯ ಬಗ್ಗೆ ಕಲ್ಪನೆಯೇ ಇಲ್ಲ. ಯಾರೋ ಅಜ್ಞಾನಿ ಎನ್‌ಜಿಒಗಳು ಪ್ರಕಟಿಸುವ ಒಂದೆರಡು ವರದಿಗಳನ್ನು ಓದಿ ಬಂದು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ”ಎಂದು ಸಿಬಿ ಜಾರ್ಜ್ ತಿರುಗೇಟು ನೀಡಿದರು. ಅಲ್ಲದೆ, ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದೆ ಮತ್ತು ಯಾವುದೇ ಉಲ್ಲಂಘನೆಯಾದರೆ ಅದಕ್ಕೆ ಕಾನೂನು ಪರಿಹಾರಗಳೂ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !