ಹೊಸದಿಗಂತ ವರದಿ, ಯಲ್ಲಾಪುರ :
ಯಲ್ಲಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು ರಾಜಕೀಯ ಕುತೂಹಲ ಸೃಷ್ಟಿಸಿದೆ.
ವಿಶೇಷವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಈ ಚುನಾವಣೆಯಲ್ಲಿ ಬಿಜೆಪಿ ಸೂಚಿಸಿದ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ವಿಪ್ ಜಾರಿ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಈ ವಿಪ್ ಜಾರಿ ಮಾಡಿ ಪ್ರತಿಯನ್ನು ಶಾಸಕರ ಕಾರ್ಯಾಲಯದ ಬಾಗಿಲಿಗೆ ಅಂಟಿಸಿದ್ದಾರೆ. ಈ ಬೆಳವಣಿಗೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕಲ್ಪನಾ ನಾಯ್ಕ ಹೆಸರು ನಿರ್ಧರಿಸಲಾಗಿದ್ದು, ಇವರ ವಿರುದ್ದ ಶಾಸಕ ಹೆಬ್ಬಾರ್ ಅವರು ತಮ್ಮ ಚುನಾವಣೆಯಲ್ಲಿ ವಿರೋಧಿ ಕೃತ್ಯ ನಡೆಸಿದ ದೂರನ್ನು ಪಕ್ಷದ ಹೈಕಮಾಂಡಿಗೆ ನೀಡಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಧರಿಸಲಾಗಿರುವ ಸೋಮೇಶ್ವರ ನಾಯ್ಕ ಹೆಬ್ಬಾರ್ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಪೊಲೀಸರು ಸುಮೋಟೋ ಪ್ರಕರಣ ದಾಖಲಾಗಿದೆ.
ಹೀಗಾಗಿ ಇವರಿಬ್ಬರ ಪರ ಮತ ಚಲಾಯಿಸಲು ಹೆಬ್ಬಾರ್ ಮನಸ್ಸು ಮಾಡುವ ಸಾಧ್ಯತೆ ತೀರಾ ಕಡಿಮೆ. ಇದಕ್ಕಿಂತ ಹೆಚ್ಚಾಗಿ ಕಳೆದ ವಿಧಾನಸಭಾ ಚುನಾವಣೆಯ ನಂತರದಲ್ಲಿ ಹೆಬ್ಬಾರ್ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ಸಿಗೆ ಹತ್ತಿರವಾಗಿದ್ದಾರೆ.
ಕಾಂಗ್ರೆಸ್ ದಿಂದ ಅಧ್ಯಕ್ಷ ಸ್ಥಾನಕ್ಕೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಅಮಿತ ಅಂಗಡಿ ಎಂದು ಹೇಳಲಾಗುತ್ತಿದೆಯಾದರೂ ಹೆಸರು ಅಂತಿಮವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಈ ಮಧ್ಯೆ ಶಾಸಕ ಹೆಬ್ಬಾರ್ ನಿಲುವು ಈಗ ಕುತೂಹಲಕಾರಿಯಾಗಿದೆ. ವಿಪ್ ಜಾರಿ ಹಿನ್ನೆಲೆಯಲ್ಲಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಬಿಜೆಪಿಗೆ ಮತ ಹಾಕಲೇಬೇಕು.ಇಲ್ಲದಿದ್ದರೆ ಪ್ರಕ್ರಿಯೆಯಿಂದ ದೂರ ಉಳಿಯಬೇಕಾಗಿದೆ.
ಶಾಸಕರಿಗೆ ವಿಪ್ ಜಾರಿ ಮಾಡುವ ಅಧಿಕಾರ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಇದೆಯೇ ಎಂಬ ಚರ್ಚೆ ಸಹ ನಡೆದಿದೆ.
ಬಿಜೆಪಿಯಿಂದ ಪ ಪಂನಲ್ಲಿ 5 ಜನ, ಕಾಂಗ್ರೆಸ್ ನಿಂದ 10 ಸದಸ್ಯ ರಿದ್ದಾರೆ. ಇದರಿಂದಾಗಿ ಹೆಬ್ಬಾರ್ ಮತ ಹೆಚ್ಚು ಮಹತ್ವ ಪಡೆಯದಾದರೂ ರಾಜಕೀಯವಾಗಿ ಇದು ತೀವ್ರ ಕುತೂಹಲಕಾರಿ.