ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಶ್ರೀಕಾಂತ್ ಒಡೇಲ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ದಿ ಪ್ಯಾರಡೈಸ್’ ಸಿನಿಮಾ ತೆರೆಕಾಣಲು ಸಜ್ಜಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಪ್ರೀಮಿಯರ್ ಶೋಗಳು ಮತ್ತು ಮೊದಲ ದಿನದ ಮುಂಗಡ ಬುಕಿಂಗ್‌ನಲ್ಲೇ ಈ ಚಿತ್ರ ಬರೋಬ್ಬರಿ 35 ಕೋಟಿ ರೂಪಾಯಿಗಳ ಗಡಿಯನ್ನು ದಾಟಿ ಅಬ್ಬರಿಸಿದೆ. ನಾನಿ ಅಭಿನಯದ ‘ಹಿಟ್: ದಿ ಥರ್ಡ್ ಕೇಸ್’ ಚಿತ್ರದ ದಾಖಲೆಯನ್ನು ಮುರಿದು, ಅವರ ವೃತ್ತಿಜೀವನದಲ್ಲೇ ಸಾರ್ವಕಾಲಿಕ ಅತ್ಯಧಿಕ ಗಳಿಕೆಯ ಓಪನಿಂಗ್ ಪಡೆಯುವ ಮುನ್ಸೂಚನೆ ನೀಡಿದೆ.
ಚಿತ್ರೋದ್ಯಮದ ಮೂಲಗಳ ಪ್ರಕಾರ, ‘ದಿ ಪ್ಯಾರಡೈಸ್’ ಬುಧವಾರದ ಪ್ರೀಮಿಯರ್ ಶೋಗಳಿಗಾಗಿಯೇ 1.78 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 5.64 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನು ಗುರುವಾರದ ಮೊದಲ ದಿನದ ಪ್ರದರ್ಶನಗಳಿಗೆ ಬರೋಬ್ಬರಿ 9.17 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು, 19.52 ಕೋಟಿ ರೂಪಾಯಿ ಗಳಿಸಿದೆ. ತಮಿಳುನಾಡು, ಕರ್ನಾಟಕ ಹಾಗೂ ಕೇರಳಕ್ಕಿಂತ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
https://www.instagram.com/p/Ddn-ibIgROd/?utm_source=ig_web_button_share_sheet
ಉತ್ತರ ಅಮೆರಿಕ ಹಾಗೂ ಆಸ್ಟ್ರೇಲಿಯಾದ ವಿತರಕರಾದ ಪ್ರತ್ಯಂಗಿರಾ ಸಿನೆಮಾಸ್ ನೀಡಿರುವ ಮಾಹಿತಿಯಂತೆ, ಉತ್ತರ ಅಮೆರಿಕದ ಪ್ರೀಮಿಯರ್ ಪ್ರದರ್ಶನಗಳಿಂದಲೇ ಮುಂಗಡವಾಗಿ ಅಂದಾಜು 10.62 ಕೋಟಿ ರೂಪಾಯಿ ಹರಿದುಬಂದಿದೆ. ಇದು ನಾನಿ ಅವರ ಹಿಂದಿನ ಚಿತ್ರ ‘ಹಿಟ್ 3’ ಸಂಗ್ರಹಿಸಿದ್ದ 4.31 ಕೋಟಿ ರೂಪಾಯಿ ಗಳಿಕೆಗಿಂತ ಎರಡರಷ್ಟು ಹೆಚ್ಚಾಗಿದೆ. ಆಸ್ಟ್ರೇಲಿಯಾದಲ್ಲೂ ಕೇವಲ ಪ್ರೀ-ಸೇಲ್ಸ್ ಆಧಾರದ ಮೇಲೆಯೇ ನಾನಿ ಕೆರಿಯರ್‌ನ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿ ‘ದಿ ಪ್ಯಾರಡೈಸ್’ ಹೊರಹೊಮ್ಮಲಿದೆ ಎಂದು ತಿಳಿಸಲಾಗಿದೆ.
ವಿಶ್ವಾದ್ಯಂತ ಕೇವಲ ಮುಂಗಡ ಬುಕಿಂಗ್ ಒಂದರಿಂದಲೇ ಈ ಸಿನಿಮಾ ಇದುವರೆಗೆ ಸುಮಾರು 35.78 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ಪ್ರೀಮಿಯರ್ ಹಾಗೂ ಮೊದಲ ದಿನದ ಟಿಕೆಟ್‌ಗಳ ಮಾರಾಟ ಬಾಕಿ ಇರುವಾಗಲೇ, ನಾನಿ ಅವರ ಸಿನಿ ಬದುಕಿನ ಸಾರ್ವಕಾಲಿಕ ದಾಖಲೆಯ ಓಪನಿಂಗ್ ಸಿಗುವುದು ಖಚಿತವಾಗಿದೆ.



