ಉಕ್ರೇನ್‌ನ ಪ್ರಮುಖ ಬಂದರು ನಗರ ಒಡೆಸಾ ಸಮೀಪ ವ್ಯಾಪಾರ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ಕಾಸರಗೋಡಿನ ಯುವ ನಾವಿಕ ಸೇರಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ಯುವಕನನ್ನು ವೆಳ್ಳರಿಕುಂಡು ಸಮೀಪದ ಎಕೆಜಿ ನಗರದ ನಿವಾಸಿ ವಾಲಿಪ್ಲಾಕಲ್ ಜೋಯ್ ಮತ್ತು ಸಾಲಿ ದಂಪತಿಯ ಏಕಮಾತ್ರ ಪುತ್ರ ಅಖಿಲ್ ಜೋಯೆಲ್ (26) ಮೃತಪಟ್ಟ ದುರ್ದೈವಿ.
ಮಾಹಿತಿಯ ಪ್ರಕಾರ, ಗಿನಿ-ಬಿಸ್ಸಾವ್ ಧ್ವಜ ಹೊಂದಿದ್ದ ಗೋಲ್ಡನ್ ಲಿಯೋ ಎಂಬ ವಾಣಿಜ್ಯ ಹಡಗು ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿದ್ದ ವೇಳೆ ರಷ್ಯಾ ಕ್ಷಿಪಣಿ ದಾಳಿಗೆ ಗುರಿಯಾಯಿತು. ದಾಳಿಯ ಸಮಯದಲ್ಲಿ ಹಡಗಿನಲ್ಲಿ ಭಾರತೀಯ ಹಾಗೂ ಸಿರಿಯನ್ ಮೂಲದ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಈ ಭೀಕರ ದಾಳಿಯಲ್ಲಿ ನಾಲ್ವರು ಭಾರತೀಯರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಭಾರತೀಯ ನಾವಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಚಲ್ ಜೋಯೆಲ್ ಕಳೆದ ಏಳು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದ ಅವರು, ಈ ಅವಧಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮದುವೆ ನಡೆಸುವ ಸಿದ್ಧತೆಯೂ ಕುಟುಂಬದಲ್ಲಿ ನಡೆಯುತ್ತಿತ್ತು. ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದ ಅಚಲ್ ಜೋಯೆಲ್, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದರು. ರೋಪ್ ಪುಲ್ ವಿಭಾಗದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು.
ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಸಹಾಯ ಧನ ಹೆಚ್ಚಿಸುವಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ.ಶಿವಲಿಂಗಪ್ಪ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿತ್ತನೆ ಪೂರ್ವ ಯೋಜನೆ ಶೇ.75 ರಷ್ಟು ಬಿತ್ತನೆ ವೈಫಲ್ಯವಾದಾಗ ಮುಖ್ಯ ಬೆಳೆ ಮತ್ತು ಇನ್ನಿತರೆ ಬೆಳೆ ಎಂದು ಪ್ರತ್ಯೇಕಿಸದೆ ಎಲ್ಲಾ ಬೆಳೆ ವಿಮೆದಾರರಿಗೆ ಬೆಳೆ ವಿಮೆ ಬಿತ್ತನೆ ಪೂರ್ವ ಕಾಲ ಯೋಜನೆ ಅನ್ವಯವಾಗಬೇಕು. ಮುಖ್ಯ ಬೆಳೆಗೆ ಮಾತ್ರ ಗ್ರಾಮ ಪಂಚಾಯಿತಿ ಮಟ್ಟದ ಬೆಳೆ ಕಟಾವು ಪ್ರಯೋಗ ಮಾಡುವ ಅಧಿಸೂಚಿತ ಮುಖ್ಯ ಬೆಳೆ ಎಂದು ಪರಿಗಣಿಸಬಾರದು ಎಂದರು.
ಬದಲಾಗಿ ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗೆ ಬಿತ್ತನೆ ಪೂರ್ವ ಯೋಜನೆ ಅನ್ವಯವಾಗಬೇಕು. ಬೆಳೆ ಕಟಾವು ಸಮೀಕ್ಷೆಗೆ ಜಮೀನುಗಳ ಆಯ್ಕೆ ಸಮಯದಲ್ಲಿ ನೀರಾವರಿ ಅಕ್ಕಪಕ್ಕದ ಜಮೀನುಗಳನ್ನು ಆಯ್ಕೆ ಮಾಡಬಾರದು. ಏಕೆಂದರೆ ಮಳೆಯಾಶ್ರಿತ ಜಮೀನನ್ನು ನಡುವಿನ ಜಮೀನು ಆಯ್ಕೆ ಮಾಡುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೆಳೆ ಇಳುವರಿ ಅರ್ಹತೆ ನಿಗಧಿಪಡಿಸುವಾಗ ಹಾಲಿ ವರ್ಷದ ಬೆಳೆ ಇಳುವರಿ ಪರಿಗಣಿಸಬೇಕು. ಹಿಂದಿನ ಐದು ವರ್ಷಗಳ ಸರಾಸರಿ ಇಳುವರಿ ಜೊತೆ ಹಾಲಿ ವರ್ಷದ ಇಳುವರಿ ನಿಗಧಿ ಮಾಡಬಾರದು. ಜಿಲ್ಲೆಯಲ್ಲಿ ಜೂ.10 ರಿಂದ ಜು.೨ ರವರೆಗೆ ಸತತವಾಗಿ ಆರು ವಾರಗಳ ಕಾಲ ಮಳೆ ಅಭಾವದಿಂದ ತೀವ್ರತರವಾದ ಭೀಕರ ಬರಗಾಲ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಶೇ.15 ರಿಂದ ೨೦ ರಷ್ಟು ಮಾತ್ರ ಬಿತ್ತನೆಯಾಗಿರುವ ಮಳೆಯಾಶ್ರಿತ ವಿವಿಧ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿ ನಾಶವಾಗುವ ಸ್ಥಿತಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಫಸಲ್‌ಬೀಮಾ ಯೋಜನೆಯಡಿ ಬೆಳೆ ನಷ್ಟವಾದಾಗ ಸುರಕ್ಷತೆ ಒದಗಿಸುವ ಬಿತ್ತನೆ ಪೂರ್ವ ಕಾಲ, ಬೆಳೆ ಕುಂಠಿತ ಮಧ್ಯಂತರ ಪರಿಹಾರ, ಇಳುವರಿ ನಷ್ಟ ಪರಿಹಾರ ನೀಡುವ ಮೂರು ಯೋಜನೆಗಳಿವೆ. ಇದರಲ್ಲಿ ಬೆಳೆ ಕುಂಠಿತ ಮಧ್ಯಂತರ ಪರಿಹಾರ ಮತ್ತು ಇಳುವರಿ ನಷ್ಟ ಪರಿಹಾರದ ಯೋಜನೆಗಳಲ್ಲಿ ಗ್ರಾಂ ಪಂ. ಮತ್ತು ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗಳಲ್ಲಿ ತಾರತಮ್ಯವಿಲ್ಲ. ಆದರೆ ಬಿತ್ತನೆ ಪೂರ್ವ ಕಾಲ ಯೋಜನೆಯಲ್ಲಿ ಮಾತ್ರ ಮುಖ್ಯ ಬೆಳೆ ಹಾಗೂ ಇನ್ನಿತರೆ ಬೆಳೆಗಳೆಂದು ವಿಭಜಿಸುವ ಮೂಲಕ ರೈತರನ್ನು ವಂಚಿಸುವ ದೊಡ್ಡ ಹುನ್ನಾರವಿದೆ ಎಂದು ಡಾ.ಸಿ.ಶಿವಲಿಂಗಪ್ಪ ದೂರಿದರು.
ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಕರಿಯಪ್ಪ, ಕಾರ್ಯದರ್ಶಿ ಎಸ್.ಪ್ರಕಾಶ್ ಒಡೆಯರ್, ಸಹ ಕಾರ್ಯದರ್ಶಿ ಡಾ.ಆರ್.ಎ.ದಯಾನಂದಮೂರ್ತಿ, ಜಿ.ಪಿ.ತಿಮ್ಮೇಗೌಡ, ಜಿ.ಎಂ.ಸಂದೀಪ್ ಕೋಡಿಹಳ್ಳಿ, ಪ್ರೊ.ಎಂ.ಶಿವಲಿಂಗಪ್ಪ, ತಿಪ್ಪೇಸ್ವಾಮಿರೆಡ್ಡಿ, ಮಹಾಂತೇಶರೆಡ್ಡಿ, ಎಲ್.ಐ.ಸಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ವಿವಿಧ ಅಭಿವೃದ್ಧಿ ನಿಗಮ ಹಾಗೂ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಅನುದಾನ ಬಳಕೆ ಪರಿಶೀಲನೆಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಳಗೇರಿ ಅಭಿವೃದ್ದಿ ಮಂಡಳಿ ಸೇರಿದಂತೆ ಹಲವು ನಿಗಮ ಮಂಡಳಿಗಳಲ್ಲಿ ಸರ್ಕಾರಿ ನಿಯಮಗಳನ್ನು ಸರಿಯಾಗಿ ಪಾಲಿಸದೇ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಅನುದಾವನ್ನು ಬಳಸಲಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಅನುದಾನ ಬಳಕೆ ಪರಿಶೀಲನೆ ಜಿಲ್ಲಾ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಪರಿಶೀಲನಾ ಭಾಗವಾಗಿದ್ದು, ದೂರುಗಳನ್ನು ಆಧರಿಸಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅನುದಾನದ ದುರ್ಬಳಕೆಯಾಗಿರುವುದು ಖಚಿತವಾದರೆ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮನೆಗಳಿಗೆ ಸರ್ಕಾರದಿಂದ ನೀಡಿದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಅನುದಾನ ದುರ್ಬಬಳಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಾಗೃತಿ ಸಮಿತಿ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಕುಂದು ಕೊರತೆ ಸಭೆ ನಡೆಸಲು ತಾಕೀತು:
ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಹಾಗೂ ಸಂತ್ರಸ್ತರು ಕುಂದು ಕೊರತೆಗಳನ್ನು ಸಲ್ಲಿಸಲು ಅನುವಾಗುವಂತೆ, ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕುಂದು ಕೊರತೆ ಸಭೆಗಳನ್ನು ನಡೆಸಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಪ್ರಾಥಮಿಕ ಹಂತದಲ್ಲಿ ಗುರುತಿಸಿ ಪರಿಹರಿಸಿದರೆ ಜಿಲ್ಲಾ ಮಟ್ಟಕ್ಕೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗಲಿದೆ. ತಪ್ಪದೇ ಸಭೆ ನಡೆಸಿ ಸಭೆಯ ನಡಾವಳಿ ಹಾಗೂ ಜಿ.ಪಿ.ಎಸ್ ಆಧಾರಿತ ಫೋಟೋಗಳನ್ನು ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.
ಇದರೊಂದಿಗೆ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಆಯಾ ಠಾಣಾಧಿಕಾರಿಗಳು ಪ್ರತಿ ೧೫ ದಿನಗಳಿಗೆ ಒಮ್ಮೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದರು.
ಇತರೆ ಜಿಲ್ಲೆಗೆ ಹೋಲಿಸಿದರೆ ಚಿತ್ರದುರ್ಗ ಎಸ್.ಸಿ ಹಾಗೂ ಎಸ್.ಟಿ ಜನಸಂಖ್ಯೆ ಹೆಚ್ಚಿದೆ. 2011ರ ಗಣತಿಯಲ್ಲಿ ಎಸ್.ಸಿ ಹಾಗೂ ಎಸ್.ಟಿ ಜನಸಂಖ್ಯೆ ಶೇ.42 ರಷ್ಟಿತ್ತು, ಸದ್ಯ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಇದರ ಆಧಾರದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಗಂಗಾಕಲ್ಯಾಣ, ಉದ್ಯೋಗ ಸಾಲ ಯೋಜನೆ, ಮನೆ ಹಂಚಿಕೆ, ಭೂ ಒಡೆತನ, ಪ್ರತಿಷ್ಠತ ಶಾಲೆ ಸೇರ್ಪಡೆ ಸೇರಿದಂತೆ ಗುರಿ ನಿರ್ಧಾರಿತ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳ ಆಯ್ಕೆ ಸಂಖ್ಯೆ ಹೆಚ್ಚಳ ಮಾಡಲು ಕೋರಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜಿ.ಪಂ ಸಿಇಓ ಡಾ.ಎಸ್.ಆಕಾಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿ.ಪಂ ಸಿಪಿಓ ಗಾಯಿತ್ರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಬಿ.ರಾಜಪ್ಪ, ಟಿ.ಡಿ.ರಾಜಗಿರಿ, ಮುದ್ದಪ್ಪ.ವೈ, ಪ್ರಶಾಂತ್ ಕುಮಾರ್, ಟಿ.ರವೀಂದ್ರ, ಹೇಮೇಗೌಡ, ಜಿ.ಪಿ.ರವಿಶಂಕರ್, ಎಂ.ರಾಜಣ್ಣ, ಓಂಕಾರ ಮೂರ್ತಿ, ಅರುಣ್ ಕುಮಾರ್, ಅವಿನಾಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿರಿದ್ದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು 10 ರಿಂದ 15 ಸಾವಿರದವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೆಡಿಪಿ ಸಭೆಯಲ್ಲಿ ಕೇಳಿಬಂದಿತು. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಜಿಲ್ಲಾ ಸರ್ಜನ್ ಡಾ. ರವೀಂದ್ರರನ್ನು ಸಭೆಗೆ ಕರೆಸಿ ಮಾಹಿತಿ ಪಡೆದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆಸಿದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಹಣ ಪಡೆಯುವುದು, ಹಣ ಕೊಟ್ಟವರಿಗೆ ಮಾತ್ರ ತುರ್ತು ಚಿಕಿತ್ಸೆ ಹಾಗೂ ಬಿಪಿಎಲ್ ಕಾರ್ಡ್ ಇರುವರಿಗೆ ಎಂಆರ್‌ಐ ಸ್ಕ್ಯಾನಿಂಗ್‌ಗೆ ಆದ್ಯತೆ ನೀಡುವುದು ಅತ್ಯಂತ ಗಂಭೀರ ವಿಷಯ. ಬಡವರಿಗೆ ಸೇವೆ ಮಾಡಬೇಕೆನ್ನುವ ಮನೋಭಾವನೆಯನ್ನು ಜಿಲ್ಲಾ ಸರ್ಜನ್ ವೃತ್ತಿಯಲ್ಲಿರುವವರು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಸರ್ಜನ್ ವೈದ್ಯಾಧಿಕಾರಿ ಡಾ.ರವೀಂದ್ರ ಅವರಿಗೆ ಸೂವಿಸಿದರು.
ನೀರಿನ ಸಮಸ್ಯೆ ಬಗೆಹರಿಸಲು ಸೂಚನೆ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ಅಧಿಕಾರಿಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಪರಿಹರಿಸಬೇಕು ಹಾಗೂ ಗ್ರಾಮಗಳಲ್ಲಿ ಚಾಲ್ತಿಯಲ್ಲಿರುವ ಬೋರ್‌ವೆಲ್‌ಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಬೆಸ್ಕಾಂ ಇಲಾಖೆ ಅಧಿಕಾರಿಗಳು ಕಲ್ಪಿಸಿಕೊಡಬೇಕು ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆಗೆ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮವಹಿಸಬೇಕು ಜೊತೆಗೆ, ಶುದ್ಧ ಕುಡಿಯುವ ನೀರಿನ ಘಟಕಗಳ ಅವಶ್ಯಕತೆ ಇರುವ ಗ್ರಾಮಗಳ ವರದಿ ನೀಡಿದರೆ ಡಿಎಂಎಫ್ ಯೋಜನೆಯಡಿ ಹೊಸ ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.
ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು. ಕಾಮಗಾರಿ ಪೂರ್ಣಗೊಳ್ಳದ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಕಳಪೆ ಕಾಮಗಾರಿಯನ್ನು ಮಾಡಿರುವಂತಹ ಗುತ್ತಿಗೆಗಾರರ ಬಿಲ್ ಪಾವತಿಸಬಾರದು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆಹಾರ ಇಲಾಖೆ ಅಕ್ಷರದ ದಾಸೋಹ, ಪಿಆರ್‌ಇಡಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಆಡಳಿತ ಅಧಿಕಾರಿ ಮಂಜುನಾಥಸ್ವಾಮಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ತಹಶೀಲ್ದಾರ್ ಗೋವಿಂದ್ ರಾಜ್, ಕೆಡಿಪಿ ಸದಸ್ಯರಾದ ನಾಗರಾಜ್, ಸಂತೋಷ್, ವಿಜಯ್ ಕುಮಾರ್ ಹಾಜರಿದ್ದರು.
ಯಾದಗಿರಿ: ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಡನೆ ಮಾತನಾಡಿ, ಉದ್ದೇಶಿಸಿ ಆಲಮಟ್ಟಿ ಶಾಸ್ತ್ರೀ ಹಾಗೂ ನಾರಾಯಣಪುರ ಬಸವಸಾಗರ ಅವಳಿ ಜಲಾಶಯಗಳಲ್ಲಿ ಕೃಷಿಗಾಗಿ ಕಾಲುವೆಗಳಿಗೆ ನೀರು ಬಿಡಲು ಕೇವಲ 10 ಟಿಎಂಸಿಯಷ್ಟು ಲಭ್ಯವಿದೆ ಒಂದೊಮ್ಮೆ ಕೃಷ್ಣಾ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅವಳಿ ಜಲಾಶಯಗಳು ಸಂಪೂರ್ಣ ಭರ್ತಿಯಾದರೆ ಮಾತ್ರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸಲು ಯೋಚಿಸಲಾಗುವದು ಎಂದು ಹೇಳಿದರು.
ಅವಳಿ ಜಲಾಶಯಗಳಲ್ಲಿನ ಡೆಡ್ ಸ್ಟೋರೇಜ್ ಹೊರತುಪಡಿಸಿ 86 ಟಿಎಂಸಿ ನೀರಿನ ಸಂಗ್ರಹ ಇದೆ ಇದರಲ್ಲಿ ಕುಡಿಯಲು, ಆರ್ಟಿಪಿಸಿ ಸೇರಿ ಇತರೆ ಉದ್ಯಮಿಗಳಿಗೆ, ಬ್ರಿಜ್ ಕಮ್ ಬ್ಯಾರೆಜುಗಳಿಗೆ, ಕೆರೆ ತುಂಬವದು, ಬಾಷ್ಪೀಕರಣ, ನದಿ ಪಾತ್ರಕ್ಕೆ ನೀರು ಹರಿಸುವದು ಸೇರಿ ಇತರೆ ಬೇಡಿಕೆ ಅನುಗುಣವಾಗಿ ವಾರ್ಷಿಕವಾಗಿ 76 ಟಿಎಂಸಿ ಯಷ್ಟು ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಕಾಲುವೆ ನೀರು ಕೊಡಲು ಆಗುವದಿಲ್ಲಾ ಒಂದೊಮ್ಮೆ ಆಗಷ್ಟ ವೇಳೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಸದ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಅಂದಾಜು 40 ಸಾವಿರ ಕ್ಯೂಸೆಕ್ ಒಳಹರಿವು ಇದೆ ನಿತ್ಯ ಜಲಾಶಯದಲ್ಲಿ 3 ರಿಂದ 4 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ ಎಂದರು.
ಅಥ್ಲೆಟಿಕ್ಸ್ ಕ್ರೀಡೆಯು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೀರ್ಘಕಾಲದಿಂದ ಭಾರತದ ಪ್ರಬಲ ವಿಭಾಗಗಳಲ್ಲಿ ಒಂದಾಗಿದೆ. 1958ರಲ್ಲಿ ಕಾರ್ಡಿಫ್‌ನಲ್ಲಿ ಮಿಲ್ಖಾ ಸಿಂಗ್ ಅವರು ಗಳಿಸಿದ ಐತಿಹಾಸಿಕ ಚಿನ್ನದ ಪದಕದಿಂದ ಹಿಡಿದು ಹಿಮಾ ದಾಸ್ ಮುಂತಾದ ದಿಗ್ಗಜರ ಸ್ಮರಣೀಯ ಪ್ರದರ್ಶನಗಳವರೆಗೆ, ಈ ಕ್ರೀಡಾಕೂಟವು ಟ್ರ್ಯಾಕ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಸತತವಾಗಿ ಸಾಬೀತುಪಡಿಸಿದೆ.
ಗ್ಲಾಸ್ಗೋ ನಗರವು 2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಸಜ್ಜಾಗುತ್ತಿದ್ದಂತೆ, ಭಾರತದ ಓಟಗಾರರ ತಂಡವು ಹೊಸ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ದೂರದ ಓಟದ ಪಟುಗಳು ರಾಷ್ಟ್ರೀಯ ದಾಖಲೆಗಳನ್ನು ಮರುಬರೆಯುತ್ತಿದ್ದಾರೆ, ದೇಶದ 400 ಮೀಟರ್ಸ್ ಓಟದ ವಿಭಾಗವು ಅಭೂತಪೂರ್ವ ಎತ್ತರವನ್ನು ತಲುಪಿದೆ ಮತ್ತು ಹೊಸ ತಲೆಮಾರಿನ ಅಥ್ಲೀಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಲು ಆರಂಭಿಸಿದ್ದಾರೆ. ಭಾರತದ ಈ ಅಭಿಯಾನದ ನೇತೃತ್ವ ವಹಿಸುತ್ತಿರುವವರಲ್ಲಿ, ಇನ್ಸ್‌ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ (IIS) ಅತ್ಯುನ್ನತ ತರಬೇತಿ ವ್ಯವಸ್ಥೆಯಲ್ಲಿ ರೂಪುಗೊಂಡ ಹಲವಾರು ಅಥ್ಲೀಟ್‌ಗಳು ಸೇರಿದ್ದಾರೆ. ಗ್ಲಾಸ್ಗೋದಲ್ಲಿ ಭಾರತದ ಅಥ್ಲೆಟಿಕ್ಸ್ ಭವಿಷ್ಯವನ್ನು ನಿರ್ಧರಿಸಬಹುದಾದ ಪ್ರಮುಖ ಓಟಗಾರರ ವಿವರ ಇಲ್ಲಿದೆ.
ಗುಲ್ವೀರ್ ಸಿಂಗ್- ಭಾರತೀಯ ದೂರದ ಓಟದ ದಿಕ್ಕನ್ನೇ ಬದಲಿಸಿದ ಅಥ್ಲೀಟ್‌ಗಳಲ್ಲಿ ಗುಲ್ವೀರ್ ಸಿಂಗ್ ಅಗ್ರಗಣ್ಯರು. ಕಳೆದ ಎರಡು ವರ್ಷಗಳಲ್ಲಿ ಈ ಏಷ್ಯನ್ ಚಾಂಪಿಯನ್ ರಾಷ್ಟ್ರೀಯ ದಾಖಲೆಗಳನ್ನು ಮುರಿಯುತ್ತಾ ಬಂದಿದ್ದು, 3,000 ಮೀಟರ್ಸ್, 5,000 ಮೀಟರ್ಸ್ ಮತ್ತು 10,000 ಮೀಟರ್ಸ್ ವಿಭಾಗಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಹಾಫ್ ಮ್ಯಾರಥಾನ್ ಪೂರ್ಣಗೊಳಿಸಿದ ಮೊಟ್ಟಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು. ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿ ಗ್ಲಾಸ್ಗೋಗೆ ತೆರಳುತ್ತಿರುವ ಗುಲ್ವೀರ್, ಟ್ರ್ಯಾಕ್‌ನಲ್ಲಿ ಭಾರತದ ಪ್ರಬಲ ಪದಕ ಭರವಸೆಗಳಲ್ಲಿ ಒಬ್ಬರಾಗಿದ್ದಾರೆ.
ಪರುಲ್ ಚೌಧರಿ- ಭಾರತದ ವಿಶ್ವಾಸಾರ್ಹ ಚಾಂಪಿಯನ್ ಪ್ರದರ್ಶಕಿ
ಒಲಿಂಪಿಯನ್, ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು 3,000 ಮೀಟರ್ಸ್ ಸ್ಟೀಪಲ್‌ಚೇಸ್ ಹಾಗೂ 5,000 ಮೀಟರ್ಸ್ ಎರಡರಲ್ಲೂ ರಾಷ್ಟ್ರೀಯ ದಾಖಲೆ ಹೊಂದಿರುವ ಪರುಲ್ ಚೌಧರಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅತ್ಯಂತ ಭರವಸೆಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ ಪದಕಗಳನ್ನು ತಂದುಕೊಡುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಪದೇ ಪದೇ ಸಾಬೀತುಪಡಿಸಿದ್ದು, ಈ ಬಾರಿಯೂ ದೂರದ ಓಟದ ವಿಭಾಗದಲ್ಲಿ ಭಾರತದ ಪ್ರಮುಖ ನಿರೀಕ್ಷೆಯಾಗಿದ್ದಾರೆ.
ವಿಶಾಲ್ ಟಿಕೆ- ಭಾರತೀಯ ಸ್ಪ್ರಿಂಟಿಂಗ್ ಕ್ಷೇತ್ರವು ಈ ವರ್ಷ ಹೊಸ ಇತಿಹಾಸ ಬರೆದಿದ್ದು, ವಿಶಾಲ್ ಟಿಕೆ ಅದರ ಮುಂಚೂಣಿಯಲ್ಲಿದ್ದಾರೆ. 22 ವರ್ಷ ವಯಸ್ಸಿನ ಈ ಯುವ ಅಥ್ಲೀಟ್, 45 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 400 ಮೀಟರ್ಸ್ ದೂರವನ್ನು ಕ್ರಮಿಸಿದ ಮೊಟ್ಟಮೊದಲ ಭಾರತೀಯ ಪುರುಷ ಎಂಬ ದಾಖಲೆ ಬರೆದರು. ಅವರು 44.98 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಈ ಅದ್ಭುತ ಯಶಸ್ಸು ಅವರನ್ನು ಭಾರತೀಯ ಅಥ್ಲೆಟಿಕ್ಸ್‌ನ ಅತ್ಯಂತ ಉಜ್ಜ್ವಲ ಪ್ರತಿಭೆಯನ್ನಾಗಿ ಮಾಡಿದ್ದು, ಗ್ಲಾಸ್ಗೋದಲ್ಲಿ ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಮೆರೆಯಲು ಅವರು ಸಜ್ಜಾಗಿದ್ದಾರೆ.
ರಾಜೇಶ್ ರಮೇಶ್- ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು ಮತ್ತು ಭಾರತದ ಏಷ್ಯನ್ ದಾಖಲೆ ನಿರ್ಮಿಸಿದ ಪುರುಷರ 4×400 ಮೀಟರ್ಸ್ ರಿಲೇ ತಂಡದ ಪ್ರಮುಖ ಸದಸ್ಯರಾಗಿರುವ ರಾಜೇಶ್ ರಮೇಶ್, ಕಾಮನ್‌ವೆಲ್ತ್ ಗೇಮ್ಸ್ ತಂಡಕ್ಕೆ ಅಮೂಲ್ಯವಾದ ಅನುಭವವನ್ನು ತಂದುಕೊಡುತ್ತಾರೆ. ವಿಶ್ವ ಅಥ್ಲೆಟಿಕ್ಸ್‌ನ ದೊಡ್ಡ ವೇದಿಕೆಗಳಲ್ಲಿ ಸ್ಪರ್ಧಿಸಿರುವ ಅನುಭವವಿರುವ ಅವರು, ರಿಲೇ ಸ್ಪರ್ಧೆಗಳಲ್ಲಿ ಭಾರತದ ಪದಕದ ಕನಸಿಗೆ ಬಲ ತುಂಬುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಸಂತೋಷ್ ಕುಮಾರ್ ತಮಿಳರಸನ್- ಭರವಸೆಯ ಹೆಜ್ಜೆಗಳೊಂದಿಗೆ ಮುನ್ನಡೆ ಸಂತೋಷ್ ಕುಮಾರ್ ತಮಿಳರಸನ್ ಅವರು ತಮ್ಮ ಅತ್ಯುತ್ತಮ ಪ್ರದರ್ಶನದ ಬಲದಿಂದ ಗ್ಲಾಸ್ಗೋಗೆ ಪ್ರಯಾಣ ಬೆಳೆಸುತ್ತಿದ್ದಾರೆ. 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರು ಮತ್ತು ಭಾರತದ ಚಿನ್ನದ ಪದಕ ವಿಜೇತ ಮಿಶ್ರ ರಿಲೇ ತಂಡದ ಭಾಗವಾಗಿರುವ ಈ ಬಹುಮುಖಿ ಸ್ಪ್ರಿಂಟರ್, ದೇಶದ ಅತ್ಯಂತ ಭರವಸೆಯ ಟ್ರ್ಯಾಕ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇವರ ನಿರಂತರ ಪ್ರಗತಿಯು ಭಾರತದ ಸ್ಪ್ರಿಂಟ್ ವಿಭಾಗದ ಗಟ್ಟಿತನವನ್ನು ಎತ್ತಿ ತೋರಿಸುತ್ತದೆ.
ರಶ್‌ದೀಪ್ ಕೌರ್- ಭಾರತದ ಮಹಿಳಾ ರಿಲೇ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದ್ದು, ರಶ್‌ದೀಪ್ ಕೌರ್ ಆ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 400 ಮೀಟರ್ಸ್ ಓಟದಲ್ಲಿ ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿರುವ ಅವರು ದೇಶದ ವಿಶ್ವಾಸಾರ್ಹ ಕ್ವಾರ್ಟರ್-ಮೈಲರ್‌ಗಳಲ್ಲಿ (400 ಮೀಟರ್ಸ್ ಓಟಗಾರರು) ಒಬ್ಬರಾಗಿದ್ದಾರೆ. ಗ್ಲಾಸ್ಗೋದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರುವ ರಿಲೇ ತಂಡದೊಂದಿಗೆ ಭಾರತಕ್ಕೆ ಯಶಸ್ಸು ತಂದುಕೊಡಲು ಅವರು ಎದುರು ನೋಡುತ್ತಿದ್ದಾರೆ.
ಅನುಭವಿ ಕ್ರೀಡಾಪಟುಗಳಿಂದ ಹಿಡಿದು ತಮ್ಮ ವೃತ್ತಿಜೀವನದ ಅತಿ ದೊಡ್ಡ ಬಹು-ಕ್ರೀಡಾಕೂಟಕ್ಕೆ ಸಿದ್ಧರಾಗುತ್ತಿರುವ ಪ್ರತಿಭೆಗಳವರೆಗೆ, ಭಾರತದ ಈ ಓಟಗಾರರ ತಂಡವು ಕ್ರೀಡಾಕ್ಷೇತ್ರದಲ್ಲಿ ದೇಶವು ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಬಿಂಬಿಸುತ್ತದೆ. ಈ ಆರು ಓಟಗಾರರು ಕೇವಲ ಪದಕಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಟ್ರ್ಯಾಕ್‌ನಲ್ಲಿ ಭಾರತದ ಹೆಮ್ಮೆಯ ಕಾಮನ್‌ವೆಲ್ತ್ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ಗುರಿ ಹೊಂದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೃಹಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಯುವ ಕಾಂಗ್ರೆಸ್ ನಾಯಕ ಮಹಮ್ಮದ್ ನಲಪಾಡ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮತ್ತೆ ಸಮನ್ಸ್ ಜಾರಿ ಮಾಡಿದೆ.
ಪೊಲೀಸ್ ವರದಿ ತಿರಸ್ಕಾರ:
ಇಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಹಮ್ಮದ್ ನಲಪಾಡ್ ಪರವಾಗಿ ಸದಾಶಿವನಗರ ಮತ್ತು ಅಶೋಕನಗರ ಠಾಣೆಯ ಪೊಲೀಸರು ಹಾಜರಾಗಿ ವರದಿಯೊಂದನ್ನು ಸಲ್ಲಿಕೆ ಮಾಡಿದ್ದರು. ಆದರೆ, ಪೊಲೀಸರು ನೀಡಿದ ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, ಇದು ತೃಪ್ತಿಕರವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಗಸ್ಟ್ 1ಕ್ಕೆ ಹಾಜರಾತಿ ಕಡ್ಡಾಯ:
ಪೊಲೀಸ್ ವರದಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯವು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಹಮ್ಮದ್ ನಲಪಾಡ್ ಬರುವ ಆಗಸ್ಟ್ 01ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಮರು ಸಮನ್ಸ್ ಜಾರಿ ಮಾಡಿದೆ.
ಕಳೆದ ವರ್ಷ ಆರ್‌ಎಸ್‌ಎಸ್ ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹಾಗೂ ಸಾರ್ವಜನಿಕವಾಗಿ ನಿಂದಿಸುವ ಉದ್ದೇಶದಿಂದ ಇಬ್ಬರೂ ನಾಯಕರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರುದಾರ ತೇಜಸ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಕೋರ್ಟ್ ಬಿಗಿ ನಿಲುವು ತಳೆದಿರುವುದರಿಂದ ಇಬ್ಬರೂ ನಾಯಕರಿಗೆ ಕಾನೂನು ಸಂಕಷ್ಟ ಎದುರಾಗಿದೆ.
ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಕೊನೆಗೂ ಮೌನ ಮುರಿದಿದ್ದು, “ರಾಜಕೀಯ ಲಾಭಕ್ಕಾಗಿ ಮಕ್ಕಳನ್ನು ಪ್ರಚೋದಿಸಬೇಡಿ, ಅವರಿಗೆ ಸರಿಯಾದ ದಾರಿ ತೋರಿಸಿ” ಎಂದು ವಿರೋಧ ಪಕ್ಷಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ನೀಟ್ ಅಕ್ರಮವನ್ನು ಖಂಡಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸದ ಎದುರು ಹಠಾತ್ ಧರಣಿ ನಡೆಸಿದ ಬೆನ್ನಲ್ಲೇ, ಪ್ರಧಾನಿ ಮೋದಿ ಅವರ ಈ ಹೇಳಿಕೆ ಹೊರಬಿದ್ದಿರುವುದು ತೀವ್ರ ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿದೆ.
ರಾಜಕೀಯ ಮಾಡದಂತೆ ಕರೆ:
“ಪರೀಕ್ಷೆಗಳ ಭದ್ರತೆ ಮತ್ತು ಯುವಜನರ ಭವಿಷ್ಯದ ವಿಷಯದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುತ್ತಿವೆ ಮತ್ತು ಅವರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಮಕ್ಕಳನ್ನು ಪ್ರಚೋದಿಸುವ ಬದಲು ಅವರಿಗೆ ಸರಿಯಾದ ದಾರಿ ತೋರಿಸುವ ಕೆಲಸವಾಗಬೇಕು” ಎಂದು ಪ್ರಧಾನಿ ಮೋದಿ ಕಟುವಾಗಿ ಹೇಳಿದ್ದಾರೆ.
ಕಠಿಣ ಕ್ರಮದ ಭರವಸೆ:
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಇರುವ ಎಷ್ಟು ದೊಡ್ಡ ಪ್ರಭಾವಿಗಳೇ ಆಗಿದ್ದರೂ ಅವರನ್ನು ಬಿಡುವುದಿಲ್ಲ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ.
ವಿಪಕ್ಷಗಳ ಧರಣಿಗೆ ಕೌಂಟರ್:
ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತಿರುವ ಬೆನ್ನಲ್ಲೇ, ಪ್ರಧಾನಿಯವರು ವಿರೋಧ ಪಕ್ಷಗಳ ಹೋರಾಟವನ್ನು ‘ಪ್ರಚೋದನಾಕಾರಿ ರಾಜಕಾರಣ’ ಎಂದು ಪರೋಕ್ಷವಾಗಿ ಬಣ್ಣಿಸಿದ್ದಾರೆ.
ದೇಶದ ಪ್ರಾಮಾಣಿಕ ಮತ್ತು ಕಷ್ಟಪಟ್ಟು ಓದುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ. ಪರೀಕ್ಷಾ ಮಂಡಳಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಯುವಜನರ ಭವಿಷ್ಯದ ಜೊತೆ ಆಟವಾಡಲು ಯಾರಿಗೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಮಾರುತಗಳು ತೀವ್ರವಾಗಿ ಚುರುಕುಗೊಂಡಿದ್ದು, ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಮಹಾರಾಷ್ಟ್ರದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ನೆರೆ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ನಗರಬಸ್ತಿಕೇರಿಯಲ್ಲಿ ಅತ್ಯಧಿಕ 121 ಮಿ.ಮೀ. ಹಾಗೂ ಹೊನ್ನಾವರದಲ್ಲಿ ದಾಖಲೆಯ ಪ್ರಮಾಣದ ಮಳೆ ವರದಿಯಾಗಿದೆ.
ಕರಾವಳಿ ಮತ್ತು ಮಲೆನಾಡಿಗೆ ಅಲರ್ಟ್:
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹದ ಆತಂಕ:
ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಮತ್ತು ದೂಧ್‌ಗಂಗಾ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಜಿಲ್ಲಾಡಳಿತಗಳು ಕಟ್ಟೆಚ್ಚರ ವಹಿಸಿವೆ.
ಬೆಂಗಳೂರು ವಾತಾವರಣ:
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ಹೀಗಾಗಿ ಮೀನುಗಾರರು ಮುಂದಿನ ಆದೇಶದವರೆಗೆ ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಭಾರತದ ಒಟ್ಟು ಸಾರ್ವಜನಿಕ ಸಾಲ ಕಳೆದ 11 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2014-15ರ ಅಂತ್ಯದಲ್ಲಿ ₹64.11 ಲಕ್ಷ ಕೋಟಿಯಿದ್ದ ಸಾರ್ವಜನಿಕ ಸಾಲವು 2025-26ರ ಅಂತ್ಯಕ್ಕೆ (ತಾತ್ಕಾಲಿಕ ಅಂಕಿ) ₹201.17 ಲಕ್ಷ ಕೋಟಿಗೆ ಏರಿಕೆಯಾಗಿದೆ.
₹137 ಲಕ್ಷ ಕೋಟಿ ಹೆಚ್ಚಾದ ಕೇಂದ್ರದ ಸಾಲ
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಾಹಿತಿ ನೀಡಿದ್ದು, ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಾಕಿ ಸಾರ್ವಜನಿಕ ಸಾಲವು ₹137.06 ಲಕ್ಷ ಕೋಟಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಸಾಲದ ಬೆಳವಣಿಗೆ ವಾರ್ಷಿಕ ಸರಾಸರಿ ಶೇ.10.95ರ ದರದಲ್ಲಿದೆ ಎಂದು ಅವರು ವಿವರಿಸಿದ್ದಾರೆ.
ಹಣಕಾಸು ಕೊರತೆಯಿಂದ ಹೆಚ್ಚಿದ ಸಾಲದ ಹೊರೆ
ಸರ್ಕಾರದ ಪ್ರಕಾರ, ಹಣಕಾಸು ಕೊರತೆಯನ್ನು (Fiscal Deficit) ನಿಭಾಯಿಸಲು ಕಳೆದ ಒಂದು ದಶಕದಲ್ಲಿ ಸುಮಾರು ₹125.99 ಲಕ್ಷ ಕೋಟಿ ಹೊಸ ಸಾಲ ಸಂಗ್ರಹಿಸಲಾಗಿದೆ. ಇದು ಕಳೆದ 10 ವರ್ಷಗಳ ಒಟ್ಟು ಹಣಕಾಸು ಕೊರತೆಗೆ ಸಮಾನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ಬಳಕೆ
ಸಂಗ್ರಹಿಸಲಾದ ಸಾಲದ ಪೈಕಿ ಸುಮಾರು ₹60.21 ಲಕ್ಷ ಕೋಟಿ, ಅಂದರೆ ಶೇ.48ರಷ್ಟು ಹಣವನ್ನು ಬಂಡವಾಳ ವೆಚ್ಚಕ್ಕೆ ಬಳಸಲಾಗಿದೆ. ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ರಕ್ಷಣಾ ಮೂಲಸೌಕರ್ಯ, ವಿದ್ಯುತ್ ಹಾಗೂ ಡಿಜಿಟಲ್ ಮೂಲಸೌಕರ್ಯ ಸೇರಿದಂತೆ ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳಿಗೆ ಈ ಹಣ ವಿನಿಯೋಗವಾಗಿದೆ.
ಸಾರ್ವಜನಿಕ ಸಾಲದ ಲೆಕ್ಕಾಚಾರದ ಪ್ರಕಾರ, ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ಸರಾಸರಿ ₹1.39 ಲಕ್ಷ ಸಾಲದ ಮೊತ್ತ ಬರುತ್ತದೆ. ಇದು ನೇರವಾಗಿ ಪ್ರತಿಯೊಬ್ಬರ ವೈಯಕ್ತಿಕ ಹೊಣೆಗಾರಿಕೆ ಎಂದಲ್ಲ, ಆದರೆ ದೇಶದ ಒಟ್ಟು ಸಾಲದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಬಳಸುವ ಅಂಕಿ ಅಂಶವಾಗಿದೆ.