ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಬಿಸಿಸಿಐ ಮುಂದೆ ತಲೆಬಾಗಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಉಭಯ ದೇಶಗಳ ನಡುವಿನ ಈ ಹಗ್ಗಜಗ್ಗಾಟಕ್ಕೆ ಅಂತ್ಯ ಹಾಡುವ ಸಲುವಾಗಿಯೇ ಐಸಿಸಿ, ವರ್ಚುವಲ್ ಸಭೆ ಆಯೋಜಿಸಿತ್ತು. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಭೆಯನ್ನು ಇವತ್ತಿಗೆ ಮುಂದೂಡಲಾಗಿತ್ತು. ಆ ಪ್ರಕಾರ ಇಂದು ನಡೆದ ಸಭೆಯಲ್ಲಿ ತನ್ನ ನಿಲುವನ್ನು ಬದಲಿಸಲು ಮುಂದಾಗಿರುವ ಪಾಕಿಸ್ತಾನ ಒಂದು ಪ್ರಮುಖ ಷರತ್ತಿನೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ.
ಬಿಸಿಸಿಐನ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಪಿಸಿಬಿ, ಐಸಿಸಿಗೆ ತಿಳಿಸಿದೆ. ಹೈಬ್ರಿಡ್ ಮಾಡೆಲ್ ಮಾತ್ರವಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸಹ ದುಬೈನಲ್ಲಿ ಆಡಲು ಪಿಸಿಬಿ ಒಪ್ಪಿಕೊಂಡಿದೆ . ಆದರೆ ಪಾಕಿಸ್ತಾನ ಇದಕ್ಕೆ ಷರತ್ತು ಕೂಡ ಹಾಕಿದ್ದು, ಮುಂದಿನ 7 ವರ್ಷಗಳವರೆಗೆ ಅಂದರೆ 2031ರವರೆಗೆ ನಡೆಯಲಿರುವ ಪ್ರತಿಯೊಂದು ಐಸಿಸಿ ಪಂದ್ಯಾವಳಿಯಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಪಿಸಿಬಿ ತನ್ನ ನಿಲುವಿನ ಬಗ್ಗೆ ಐಸಿಸಿಗೆ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಬೇಡಿಕೆಯ ಹಿಂದಿನ ತಂತ್ರ
ಪಿಸಿಬಿಯ ಈ 7 ವರ್ಷಗಳ ಷರತ್ತಿನ ಹಿಂದೆ ಬಿಸಿಸಿಐಗೆ ಎದುರೇಟು ನೀಡುವ ಸಂಚು ಅಡಗಿದೆ. ಹೇಗೆಂದರೆ 2031ರ ವರೆಗೆ ಪ್ರತಿ ವರ್ಷ ಪ್ರಮುಖ ಟೂರ್ನಿ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದರ ಅಡಿಯಲ್ಲಿ 2026 ರಲ್ಲಿ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2029ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದರ ನಂತರ ಭಾರತ ಮತ್ತು ಬಾಂಗ್ಲಾದೇಶ 2031 ರಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಆತಿಥ್ಯ ನೀಡಲಿವೆ. ಇದರ ಜೊತೆಗೆ ಮುಂದಿನ ವರ್ಷ ಮಹಿಳೆಯರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲ್ಲಿದೆ. ಹೀಗಾಗಿ ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳಿಗೆ ಭಾರತದ ಆತಿಥ್ಯವೇ ಬಹುಪಾಲಿದೆ. ಆದ್ದರಿಂದಲೇ ಈ ಹೈಬ್ರಿಡ್ ಮಾದರಿಯನ್ನು ಮುಂದಿನ 7 ವರ್ಷಗಳ ಕಾಲ ಎಲ್ಲಾ ಐಸಿಸಿ ಈವೆಂಟ್ಗಳಲ್ಲಿ ಅಳವಡಿಸಬೇಕು ಎಂಬ ಷರತನ್ನು ಪಾಕಿಸ್ತಾನ ಮುಂದಿಟ್ಟಿದೆ.
ಪಿಟಿಐ ವರದಿಯ ಪ್ರಕಾರ, ಈ ಷರತ್ತಿನ ಹೊರತಾಗಿ, ವಾರ್ಷಿಕ ಆದಾಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಷರತ್ತನ್ನೂ ಪಿಸಿಬಿ ಮುಂದಿಟ್ಟಿದೆ. ಐಸಿಸಿಯ ಪ್ರಸ್ತುತ ಆದಾಯ ಮಾದರಿಯ ಅಡಿಯಲ್ಲಿ, ಬಿಸಿಸಿಐ ಗರಿಷ್ಠ ಹಣವನ್ನು ಅಂದರೆ ಶೇ, 39 ಪ್ರತಿಶತ ಹಣವನ್ನು ಪಡೆಯುತ್ತದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಕೇವಲ 5.75 ಪ್ರತಿಶತ ಹಣವನ್ನು ಪಡೆಯುತ್ತದೆ. ಇದೀಗ ಇದನ್ನೂ ಹೆಚ್ಚಿಸುವಂತೆ ಪಿಸಿಬಿ ಆಗ್ರಹಿಸುತ್ತಿದೆ.