ಕಮರ್‌ ಬಾಜ್ವಾ ಪಾಕ್‌ ಸೇನಾ ಮುಖ್ಯಸ್ಥರಾದ ಮೇಲೆ ದೇಶವಿದೇಶಗಳಲ್ಲಿ ಕೋಟಿ ಕೋಟಿ ಆಸ್ತಿಮಾಡಿದ ಕುಟುಂಬ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಜನರಲ್ ಕಮರ್ ಜಾವೇದ್ ಬಾಜ್ವಾ ನೇಮಕಗೊಂಡ ಆರು ವರ್ಷಗಳ ಅವಧಿಯಲ್ಲಿ ಅವರ ಕುಟುಂಬದ ಸದಸ್ಯರ ಸಂಪತ್ತಿನಲ್ಲಿ ತೀವ್ರ ಏರಿಕೆಯಾಗಿರುವ ವಿಚಾರವನ್ನು ವರದಿಯೊಂದು ಬಯಲಿಗೆಳೆದಿದೆ. ಬಜ್ವಾ ಅಧಿಕಾರಾವಧಿ ಇನ್ನು ಎರಡು ವಾರಗಳಿಗಿಂತ ಕಡಿಮೆ ಇರುವ ವೇಳೆಯಲ್ಲೇ ಈ ವರದಿ ಪ್ರಕಟವಾಗಿದ್ದು ಪಾಕಿಸ್ತಾನದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ.

ಪಾಕಿಸ್ತಾನಿ ಪತ್ರಕರ್ತ ಅಹ್ಮದ್ ನೂರಾನಿ ಅವರು ʼಫ್ಯಾಕ್ಟ್ ಫೋಕಸ್‌ʼ ವರದಿಯಲ್ಲಿ ಬಾಜ್ವಾ ಕುಟುಂಬದ ಆಸ್ತಿ ಹೇಗೆಲ್ಲಾ ವೃದ್ಧಿಸಿತು, ಅವರೆಲ್ಲಾ ಹೇಗೆ ಶತ ಕೋಟ್ಯಾಧಿಪತಿಗಳಾದರು, ಬಾಜ್ವಾ ನಿಜಕ್ಕೂ ಪ್ರಾಮಾಣಿಕರೇ ಎಂಬಿತ್ಯಾದಿ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಕಮರ್ ಜಾವೇದ್ ಬಜ್ವಾ 2016 ರಲ್ಲಿ ಪಾಕ್‌ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ತಕ್ಷಣವೇ ಅವರ ಕುಟುಂಬದ ಸದಸ್ಯರು ಹೊಸ ವ್ಯವಹಾರಗಳನ್ನು ಪ್ರಾರಂಭಿಸಿದರು. ಅವರು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಫಾರ್ಮ್‌ಹೌಸ್‌ಗಳ ಮಾಲೀಕರಾದರು ಮತ್ತು ವಿದೇಶಗಳಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿಗಳನ್ನು ಖರೀದಿಸಿದರು ಮತ್ತು ಶತಕೋಟಿ ಡಾಲರ್‌ ಗಳ ಒಡೆಯರಾದರು ಎಂದು ವರದಿಯಲ್ಲಿ ಹೇಳಲಾಗಿದೆ.
ಖಮರ್ ಜಾವೇದ್ ಬಾಜ್ವಾ ಅವರ ಪತ್ನಿ ಆಯೇಷಾ ಅಮ್ಜದ್, ಅವರ ಸೊಸೆ ಮಹ್ನೂರ್ ಸಬೀರ್ ಮತ್ತು ಇತರ ನಿಕಟ ಕುಟುಂಬ ಸದಸ್ಯರ ಆರ್ಥಿಕ ವ್ಯವಹಾರವನ್ನು ಪರಿಶೀಲಿಸಿ ಹಲವಾರು ಅಂಕಿಅಂಶ ಕಲೆಹಾಕಿ ಈ ವರದಿಯನ್ನು ರೂಪಿಸಲಾಗಿದೆ.
“ಆರು ವರ್ಷಗಳಲ್ಲಿ ಬಾಜ್ವಾರ ಎರಡು ಕುಟುಂಬಗಳು ಕೋಟ್ಯಾಧಿಪತಿಗಳಾದರು. ಅಂತರರಾಷ್ಟ್ರೀಯ ವ್ಯಾಪಾರವನ್ನು ಪ್ರಾರಂಭಿಸಿದರು, ಬಹು ವಿದೇಶಿ ಆಸ್ತಿಗಳನ್ನು ಖರೀದಿಸಿದರು, ವಿದೇಶಕ್ಕೆ ಬಂಡವಾಳವನ್ನು ವರ್ಗಾಯಿಸಲು ಪ್ರಾರಂಭಿಸಿದರು, ವಾಣಿಜ್ಯ ಪ್ಲಾಜಾಗಳು, ವಾಣಿಜ್ಯ ಪ್ಲಾಟ್‌ಗಳು, ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿ ಬೃಹತ್ ಫಾರ್ಮ್‌ಹೌಸ್‌ಗಳು, ಲಾಹೋರ್‌ನಲ್ಲಿ ಅಪಾರ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊ ಸೇರಿದಂತೆ ಬಾಜ್ವಾ ಕುಟುಂಬದ ಆಸ್ತಿ ಅಸಾಧ್ಯ ಪ್ರಮಾಣದಲ್ಲಿ ಏರಿಕೆಯಾಗಿದೆ.  ಕಳೆದ ಆರು ವರ್ಷಗಳಲ್ಲಿ ಬಾಜ್ವಾ ಕುಟುಂಬವು ಪಾಕಿಸ್ತಾನದ ಒಳಗೆ ಮತ್ತು ಹೊರಗೆ ಸಂಗ್ರಹಿಸಿದ ಆಸ್ತಿ ಮತ್ತು ವ್ಯವಹಾರಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು 12.7 ಶತಕೋಟಿಗಿಂತಲೂ ಹೆಚ್ಚು” ಎಂದು ವರದಿ ಹೇಳಿದೆ.
ಕಮರ್ ಜಾವೇದ್ ಬಜ್ವಾ ಅವರು ತಾವು 2013 ರಲ್ಲಿ ಹೊಂದಿದ್ದ ಸಂಪತ್ತಿನ ವಿವರದ ಹೇಳಿಕೆಯನ್ನು 2013 ರಿಂದ 2017 ರ ಅವಧಿಯಲ್ಲಿ ಮೂರು ಬಾರಿ ಪರಿಷ್ಕರಿಸಿ ಹೇಳಿದ್ದಾರೆ ಎಂಬುದನ್ನು ವರದಿಯು ಗಮನಿಸಿದೆ.
“ಅಕ್ಟೋಬರ್ 2018 ರ ಕೊನೆಯ ವಾರದಲ್ಲಿ ಅವರ ಸೊಸೆಯ ಘೋಷಿತ ಆಸ್ತಿಯ ಒಟ್ಟು ಮೌಲ್ಯವು ಸೊನ್ನೆಯಾಗಿತ್ತು, ಆದರೆ ಇದು ನವೆಂಬರ್ 02, 2018 ರಂದು ಅವರ ಮದುವೆಗೆ ಕೇವಲ ಒಂದು ವಾರದ ಮೊದಲು ಒಂದು ಶತಕೋಟಿ (₹1271 ಮಿಲಿಯನ್) ಗಿಂತ ಹೆಚ್ಚಾಗಿದೆ” ಎಂಬ ಸ್ಫೋಟಕ ಸತ್ಯಗಳಮನ್ನು ವರದಿ ಬಿಚ್ಚಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!