ಪಾಕಿಸ್ತಾನ ಕಾಂಟ್ರಾಕ್ಟ್ ಪೋಸ್ಟರ್ ಪ್ರಕರಣ: ಕನಸೆಗದ್ದೆಯ ನಿವಾಸಿಯ ಬಂಧನ

ಹೊಸ ದಿಗಂತ ವರದಿ, ಅಂಕೋಲಾ:

ಪಟ್ಟಣದ ಸ್ಪೋರ್ಟ್ಸ್ ಅಂಗಡಿಯೊಂದರ ಗೋಡೆಯ ಮೇಲೆ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆದಿರುವ ಪೋಸ್ಟರ್ ಅಂಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಕನಸೆಗದ್ದೆಯ ನಿವಾಸಿಯೋರ್ವನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು , ಹಿರಿಯ ಪೊಲೀಸ್ ಅಧಿಕಾರಿಗಳು ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿತನ ವಿಚಾರಣೆ ನಡೆಸಿದ್ದಾರೆ.

ಸಂಗ್ಲಾನಿ ವೆಲಫರ್ ಟ್ರಸ್ಟ್ ಎಂಬ ತಲೆ ಬರಹದಡಿಯಲ್ಲಿ ತಾಲೂಕಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳ ಹೆಸರು ಬರೆದು ವಿಚಿತ್ರ ಸಂಕೇತ ವಾಕ್ಯಗಳ ರೀತಿಯಲ್ಲಿ ಬರೆದ ಪೋಸ್ಟರ್ ನಲ್ಲಿ ಪಾಕಿಸ್ತಾನ ಕಾಂಟ್ರಾಕ್ಟ್ ಎಂಬ ಉಲ್ಲೇಖವಿರುವುದು ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೇ ಈ ಕುರಿತು ಸ್ಪೋರ್ಟ್ಸ್ ಅಂಗಡಿ ಮಾಲಿಕ ಕೇಣಿ ನಿವಾಸಿ ಮಿಥುನ ರೋಹಿದಾಸ ಬಂಟ್ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿತರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

ಈ ಬಗ್ಗೆ ತೀವ್ರ ವಿಚಾರಣೆ ನಡೆಸಿರುವ ಅಂಕೋಲಾ ಪೊಲೀಸರು ಪಟ್ಟಣದ ಕನಸೆಗದ್ದೆ ನಿವಾಸಿ ವ್ಯಕ್ತಿಯನ್ನು ಬಂಧಿಸಿದ್ದು ಈತ ದುಬೈನಲ್ಲಿ ಕೆಲಸದಲ್ಲಿದ್ದು ಹಿಂದುರಿಗಿದವನು ಎಂದು ತಿಳಿದು ಬಂದಿದ್ದು, ಮಾನಸಿಕ ಅಸ್ವಸ್ಥ ಎಂದು ಆತನ ಮನೆಯವರು ಹೇಳಿಕೆ ನೀಡಿದ್ದಾರೆ. ಪೋಸ್ಟರ್ ನಲ್ಲಿ ಬರೆದಿರುವ ವಾಕ್ಯಗಳು, ಬಳಸಿರುವ ಕೆಂಪು ಅಕ್ಷರಗಳು ಸಾಕಷ್ಟು ಸಂಶಯಾಸ್ಪದವಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷರು ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಂಧಿತ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!